SHARE

ಬೆಳಗಾವಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ, ರಾಜ್ಯದ ರೈತರ ಕೈಗೆ ಅಧಿಕಾರ ನೀಡಲಾಗುತ್ತದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಜೆಡಿಎಸ್ ತನ್ನ ಖಾತೆ ತೆರೆಯುವಲ್ಲಿ ವಿಪರೀತ ಯತ್ನ ನಡೆಸಿದ್ದು, ಮಾಜಿ ಸಿಎಂ ಎಚ್ಡಿಕೆ ಇಂದು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ರಣಕಹಳೆ ಊದಿದ್ದಾರೆ.

ಬೈಲಹೊಂಗಲ ಮತಕ್ಷೇತ್ರದ ಮುರಗೋಡು ಹೋಬಳಿಯಲ್ಲಿ ಇಂದು ಸಂಜೆ 7:30ಕ್ಕೆ ‘ಕುಮಾರ ಪರ್ವ’ ಸಮಾವೇಶಕ್ಕೆ ದೀಪಬೆಳಗಿಸಿ ಚಾಲನೆ ನೀಡಿದರು. IAS ಅಧಿಕಾರಿಗಳ ಮಾತು ಕೇಳಿಕೊಂಡು ನಾನು ಸರಕಾರ ನಡೆಸುವುದಿಲ್ಲ. ಪ್ರತಿ ಜಿಲ್ಲೆಯಿಂದ ರೈತರು ಮತ್ತು ಶ್ರಮಿಕ ವರ್ಗದವರನ್ನು ಕರೆಸಿ ಅವರ ಸಲಹಾ ಸಮಿತಿ ರಚಿಸಿ ಅದರಂತೆ ಸರಕಾರ ಅಧಿಕಾರ ನಡೆಸುತ್ತದೆ ಎಂದರು. ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಜನತೆ ಜೆಡಿಎಸ್ ಗೆ ಅಧಿಕಾರ ಕೊಟ್ಟು ನೋಡಿ ಎಂದು ಎಚ್ಡಿಕೆ ಜನರಲ್ಲಿ ಹೊಸ ಆಶಾಭಾವ ಇಂದು ಹುಟ್ಟಿಸಿದರು.

ಜೆಡಿಎಸ್ ಪಕ್ಷದ ಸಮಾವೇಶಕ್ಕೆ ಜನ ಸೇರುವರೇ ಎಂಬ ಪ್ರತಿಪಕ್ಷಗಳ ಮೂಗುಮುರಿಯುವ ಕುಹಕಿಗೆ ವ್ಯತಿರಿಕ್ತವಾಗಿ ಇಂದು ಮುರಗೋಡದಲ್ಲಿ 5 ಸಾವಿರ ಮೇಲ್ಪಟ್ಟು ಜನ ಸೇರಿಬಂದರು. ಶಂಕರ ಮಾಡಲಗಿ, ಬಾಬಾಗೌಡ ಪಾಟೀಲ, ಫಹಿಜುಲ್ಲಾ ಮಾಡಿವಾಲೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದರು.