SHARE

ಬೆಳಗಾವಿ: ಪೊಲೀಸ್ ವಲಯ ಮಹಾನಿರೀಕ್ಷಕರ (ಐಜಿಪಿ) ದಿವ್ಯ ಗಮನಕ್ಕೆ ಒಬ್ಬ ಪೇದೆ ಬರಬೇಕಾದರೆ ಆತನ ಕರ್ತವ್ಯ ದಕ್ಷತೆ ಎಷ್ಟಿರಬೇಡ…! ಹೌದು, ಇಂದು ಬೆಳಗಾವಿ ಐಜಿಪಿ ಅಲೋಕಕುಮಾರ ರೌಡಿ ಚಟುವಟಿಕೆಗಳಿಗೆ ಹೆಸರಾದ ವಿಜಾಪುರ ಜಿಲ್ಲೆಯ ಸಿಂಧಗಿ ಠಾಣೆಗೆ ದಿಢೀರ್ ಭೇಟಿ ನೀಡಿದರು. ಠಾಣೆಯ ಠಾಣಾಧಿಕಾರಿ ತನ್ನ ವ್ಯಾಪ್ತಿಯ ರೌಡಿಶೀಟರಗಳು & ಕೀಟಳೆ ಪ್ರವೃತ್ತಿ ಜನರ ಬಗ್ಗೆ ಐಜಿಪಿ ಪ್ರಶ್ನೆಗೆ ಉತ್ತರಿಸಲು ತಡವರಿಸಿದ. ಠಾಣಾಧಿಕಾರಿಗೆ ತನ್ನ ಠಾಣಾ ವ್ಯಾಪ್ತಿಯ ಪರಿಜ್ಞಾನ ಬೇಕಲ್ಲವೇ? ನಗರ ಠಾಣೆಯ ಪೇದೆ ಈರಣ್ಣ ದಳವಾಯಿ ಎಂಬಾತನ ಕರ್ತವ್ಯ ದಕ್ಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉತ್ತರ ವಲಯ ಐಜಿಪಿ ಅಲೋಕ ಕುಮಾರ ಅವರು ತಮ್ಮ ಪಾಕೇಟನಿಂದ ₹1000 ಬಹುಮಾನ ನೀಡಿ, ಬೆನ್ನುತಟ್ಟಿ ಹರ್ಷವ್ಯಕ್ತಪಡಿಸಿದ್ದಾರೆ.

ಅಲೋಕಕುಮಾರ ಅವರು ಕೇಳಿದ ಪ್ರಶ್ನೆಗೆ ಠಾಣೆಯ ಅಧಿಕಾರಿ ರೌಡಿಗಳ ಬಗ್ಗೆ ಮಾಹಿತಿ ನೀಡಲು ತಡವರಿಸಿದ, ಈ ಸಂದರ್ಭ ಒಬ್ಬ ಪೇದೆಯನ್ನು ಕರೆಯುವಂತೆ ಐಜಿಪಿ ತಿಳಿಸಿದರು. ಆಗ ಪೇದೆ ದಳವಾಯಿ ಅವರು ಠಾಣಾ ವ್ಯಾಪ್ತಿಯ ಎಲ್ಲ ರೌಡಿಗಳ ವಿವರವನ್ನು ಪಟಾಪಟ್ ಉಸಿರುಬಿಡದೇ ತಿಳಿಸಿದ್ದರಿಂದ ಐಜಿಪಿ ಮನ ಸೆಳೆದಿದ್ದಾನೆ. ರೌಡಿಗಳ ವಿಚಾರಣೆ ಮುಗಿದ ನಂತರ ಎಲ್ಲ ಪೋಲಿಸ್ ಅಧಿಕಾರಿಗಳ ಎದುರೇ ಅಲೋಕ್ ಕುಮಾರ ಜೇಬಿನಲ್ಲಿದ್ದ ಹಣ ತೆಗೆದು ಪೇದೆಗೆ ನೀಡಿ ಠಾಣೆಯ ಬಗ್ಗೆ ನಿನ್ನಲ್ಲಿ ವಿಷಯ ಜ್ಞಾನ ತುಂಬಾ ಇದೆ ಎಂದು ಕೈ ಕುಲಕಿ ಮೆಚ್ಚುಗೆ ವ್ಯಕ್ತಪಡಿಸಿದರು.