SHARE

ಬೆಳಗಾವಿ: ‘ರಾಹು’ ಎಂದರೆ ಮಾರುದ್ದ ಜಿಗಿಯುವವರ ಮಧ್ಯೆ ಈಗ ‘ರಾಹು’ ಮಹಾಶಯನನ್ನೇ ಅಪ್ಪಿಕೊಳ್ಳಲು ಸಜ್ಜಾಗಿದ್ದಾರೆ ಬೆಳಗಾವಿಯ ಮುಂಚೂಣಿ ರಾಜಕಾರಣಿ ಸತೀಶ ಜಾರಕಿಹೊಳಿ. ಇಂದಿನಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಶುರು ಮಾಡಿದ್ದಾರೆ. ಇಂದು ಆಗಲೇ ಮೂವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಶಾಸ್ತ್ರಬದ್ಧ ಶುಭ ಸಮಯದಲ್ಲಿಯೇ ಸಲ್ಲಿಸಿದ್ದಾರೆ. ದಿನಾಂಕ, ಮಹೂರ್ತ, ಶಕುನ ನೋಡಿಕೊಂಡು ಅಪ್ಪಾ… ಎಲ್ಲಾ ಒಳ್ಳೆಯದಾಗಲಿ ಎಂದು ಎಲ್ಲರೂ ಹಾರೈಸಿ ದೈವದ ಮೇಲೆ ಭಾರ ಹಾಕಿ ಶುಭ ಕಾರ್ಯಕ್ಕೆ ಇಳಿಯುವುದುಂಟು. ಆದರೆ ಮೌಢ್ಯದ ವಿರುದ್ಧ ಹೋರಾಟ ಆರಂಭಿಸಿರುವ ಸತೀಶ ಜಾರಕುಹೊಳಿ ಈಗ ‘ಅನಿಷ್ಠ ಕಾಲ’ ವೆಂದೇ ಜನಜನಿತ ‘ರಾಹು’ ಸಮಯದಲ್ಲಿ ತಮ್ಮ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.

ನಾನು ನನ್ನ ಕ್ಷೇತ್ರ ಪ್ರಚಾರ ಮಾಡೊಲ್ಲ. ನಮ್ಮ ಕಾರ್ಯಕರ್ತರು ನನ್ನ ಪ್ರಚಾರ ಮಾಡುತ್ತಾರೆ. ನಾನು ಕಾಂಗ್ರೆಸ್ ಪಕ್ಷಕ್ಕಾಗಿ ರಾಜ್ಯ ಪ್ರವಾಸ ಮಾಡುವೆ, ರಾಹು ಕಾಲದಲ್ಲೇ ನಾಮಪತ್ರ ಸಲ್ಲಿಸುವೆ ಎಂದು ಸತೀಶ ಮನದಿಂಗಿತ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಸ್ಕ್ರತಿಯಲ್ಲಿ ‘ರಾಹು’ ವಿನ ಆಟಾಟೋಪಗಳ ಬಗ್ಗೆ ವಿಪರೀತ ಭಯ ಇದೆ. ರಾಹು ಉಚ್ಫ್ರಾಯನಾಗಿರುವ ಸಮಯದಲ್ಲಿ ಶುಭಕೆಲಸಗಳಿಗೆ ಮುಂದಡಿ ಇಡಬಾರದು ಎಂಬ ದಟ್ಟ ನಂಬಿಕೆ ಇದೆ. ಇದನ್ನೂ ಹಿಂದೆಂದಿನಿಂದ ಇಂದಿನವರೆಗೂ ಜನಸಾಮಾನ್ಯರಿಂದ ಹಿಡಿದು ದೇಶದ ಪ್ರಧಾನಿವರೆಗಿನ ಘಟಾನುಘಟಿಗಳು ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಇದಕ್ಕೆ ಶೆಡ್ಡು ಹೊಡೆದಿರುವ ಸತೀಶ ತಮ್ಮ ಮೌಢ್ಯವಿರೋಧಿ ಹೋರಾಟ ಪ್ರಬಲಗೊಳಿಸಲು ನಿರ್ಧರಿಸಿದ್ದಾರೆ. ಮೌಢ್ಯವಿರೋಧಿ ಹೋರಾಟ & ಸ್ಮಶಾನದಲ್ಲಿ ಊಟ-ವಸತಿ ಸಂಪ್ರದಾಯ ಪ್ರಾರಂಭಿಸಿದಾಗಿನಿಂದ ನನಗೆ ಒಳ್ಳೆಯದೇ ಆಗಿದೆ. ಹೆಲಿಕಾಫ್ಟರ್ ಖರೀದಿಸಿದ್ದೇನೆ, ಸಕ್ಕರೆ ಕಾರ್ಖಾನೆ ಕಟ್ಟಿಸಿದ್ದೇನೆ ಎಂದು ಅವರೇ ತೆರೆದ ಸಭೆಯಲ್ಲಿ ಹೇಳಿಕೊಂಡಿದ್ದರು. ಈಗ ಚುನಾವಣಾ ಕಣಕ್ಕೆ ಸ್ವತಃ ‘ರಾಹು’ ಮಹಾತ್ಮನಿಗೇ ಶೆಡ್ಡು ಹೊಡೆದು ಅಖಾಡಕ್ಕಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಈಗ ‘ರಾಹು vs ಸತೀಶ ಜಾರಕಿಹೊಳಿ’ ಎಂಬಂತಾಗಿದೆ ಯಮಕನಮರಡಿ ಚುನಾವಣಾ ಕಣ…! …ರಾಹು ಕಾಲ ಶುಭ ಕಾರ್ಯಗಳಿಗೆ ಒಳ್ಳೆಯದಲ್ರಿ ಆತನ ವಕ್ರದೃಷ್ಟಿ ಎದುರು ಯಾರ ಆಟ ನಡೆಯದು ಎನ್ನುತ್ತಾರೆ ಶಾಸ್ತ್ರ ಬಲ್ಲ ಹಿರಿಯರು…

ಆದರೆ ಮೌಢ್ಯವನ್ನೇ ವಿರೋಧಿಸುವವನಿಗೆ ‘ರಾಹು’ ಏನು ಮಾಡಿಯಾನು!? ಎಂಬುವುದಂತೂ ಸತ್ಯ. ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಮಾರುತಿ ಅಷ್ಟಗಿ ಅವರಿಗೆ ಜನ ಒಲಿಯುವರೋ…? ಇಲ್ಲವೇ ಏಕಮಾರ್ಗದ ವಿಜಯ ಪತಾಕೆ ಸತೀಶ ಅವರೇ ಪಡೆಯುವರೋ ಅದನ್ನು ಕಾಲ ನಿರ್ಧರಿಸಬೇಕಿದೆ. ಜನರಲ್ಲಿನ ಮೌಢ್ಯ ಅಳಿಸಿಹಾಕುವ ನಿಟ್ಟಿನಲ್ಲಿ ಸತೀಶ ಅವರ ಈ ರಾಹುಕಾಲದ ನಾಮಪತ್ರ ಸಲ್ಲಿಕೆ ವಿಷಯ ಈಗ ಜನರ ಕುತೂಹಲ ಕೆರಳಿಸಿದ್ದು. ಸಂಪ್ರದಾಯಪ್ರಿಯರಿಗೆ ಎದೆ ಢವಢವ ಎನ್ನಿಸಿದೆ…