SHARE

ಬೆಳಗಾವಿ: ಮಹಾರಾಷ್ಚ್ರ ಏಕೀಕರಣ ಸಮಿತಿಯ ಖಾನಾಪುರ ಶಾಸಕ ಅರವಿಂದ ಪಾಟೀಲ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮಾಹಿತಿ ಹಕ್ಕು ಅದಿನಿಯದಡಿಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಕಳೆದ ಚುನಾವಣೆಯಲ್ಲಿ ತನ್ನ ಪತ್ನಿಯ ಬಗ್ಗೆಯೇ ಅರವಿಂದ ಪಾಟೀಲರು ತಪ್ಪು ಮಾಹಿತಿ ನೀಡಿದ್ದು ಬಹಿರಂಗವಾಗಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೂಲಕ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು ಎಂದು ಘೋಷಣೆ ಕೂಗುವ ಶಾಸಕ ಅರವಿಂದ ಪಾಟೀಲರು ತನ್ನ ಪತ್ನಿ ಕರ್ನಾಟಕ ಸರ್ಕಾರದ ಉದ್ಯೋಗಿ ಎನ್ನುವ ಸಂಗತಿಯನ್ನು ಮುಚ್ಚಿಟ್ಟು ಗೃಹಿಣಿ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಹೋರಾಟಗಾರ ಖಾನಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದಾರೆ. ಈ ಬಗ್ಗೆ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆಪಾದನಾ ಪತ್ರ ಕೂಡ ಸಲ್ಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 417, 125 (ಎ) ಜನತಾ ಪ್ರಾತಿನಿಧ್ಯ ಕಾನೂನು ಅಡಿಯಲ್ಲಿ ಮರಾಠಿ ಮತ್ತು ಕನ್ನಡ ಭಾಷಿಕರಿಗೆ ದ್ರೋಹ ಬಗೆದ ಬಗ್ಗೆ ವರದಿಯಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆಂದು ಹೇಳಲಾಗಿದೆ.

ಏನಿದು ಪ್ರಕರಣ?: ಮಹಾರಾಷ್ಟ್ರ ಏಕೀಕರಣ ಸಮಿತಿ ಶಾಸಕ ಅರವಿಂದ ಪಾಟೀಲರ ಪತ್ನಿ ಶ್ರೀಮತಿ ಸ್ರಾಮಿಜಿ ಉರ್ಫ್ ಸುಜಾತಾ ರಾಮಚಂದ್ರ ಪಾಟೀಲರು ಹುಕ್ಕೇರಿ ತಾಲೂಕಿನ ಹಿಟ್ನಿಯ ಸರ್ಕಾರಿ ಪ್ರಾಥಮಿಕ ಮರಾಠಿ ಶಾಲೆಯ ಶಿಕ್ಷಕಿಯಾಗಿ 2007 ಜೂನ್ 13 ರಂದು ಸೇರ್ಪಡೆಗೊಂಡಿದ್ದರು. ಈಗ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಯ ಟಿಜಿಟಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ಖಾಯಂ ವಿಳಾಸರನ್ನು ಅರವಿಂದ ಚಂದ್ರಕಾಂತ ಪಾಟೀಲ, 615, ಸರಾಫ್ ಗಲ್ಲಿ, ನಂದಗಡ, ಖಾನಾಪುರ ಎಂದು ತೋರಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತನಿಖಾಧಿಕಾರಿಗಳು ಮತ್ತು ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಅಪರಾಧ ವಿಭಾಗಕ್ಕೆ ಕಳೆದ ದಿನಾಂಕ 30 ಜನೇವರಿ 2018 ರಂದು ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಶಾಸಕ ಅರವಿಂದ ಪಾಟೀಲರು ಕಳೆದ 2013 ರ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತನ್ನ ಪತ್ನಿಯ ಸೇವೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಲ್ಲದೇ ಅವರ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆ ಕೂಡ  ಇಲ್ಲ ಎನ್ನುವ ಮತ್ತೊಂದು ಸುಳ್ಳನ್ನು ನೀಡಿದ್ದಾರೆ ಎನ್ನುವುದು ಗೊತ್ತಾಗಿದೆ. ಆದರೆ ಶಾಸಕರ ಪತ್ನಿಯ ಪ್ರತಿ ತಿಂಗಳ ಸಂಬಳವು ಹುಕ್ಕೇರಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಖಾತೆ ನಂಬರ 64022591514) ಇದೆ. ಈ ಖಾತೆಯು 15ಜನೇವರಿ 2007 ರಿಂದ 17.1.2018 ರವರೆಗೆ ಇದರ ಮೂಲಕವೇ ವ್ಯವಹಾರ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆಯವರು ವಿಚಾರಣೆ ನಡೆಸಿ ಚುನಾವಣಾ ಆಯೋಗಕ್ಕೆ ವರದಿಯನ್ನು ಕಳುಹಿಸಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ನೇರವಾಗಿ ಜಿಲ್ಲಾ ಚುನಾವಣಾಧಿಕಾರಗಳಿಗೆ ಮಾಹಿತಿ ರವಾನೆ ಮಾಡಿದ್ದು ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದೆ.