SHARE

ನವದೆಹಲಿ: 12 ವರ್ಷದೊಳಗಿನ ಅಪ್ರಾಪ್ತ ಬಾಲಕೀಯರ ಮೇಲೆ ಅತ್ಯಾಚಾರವೆಸಗುವ ಶಿಸು ಕಾಮಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪೋಕ್ಸೋ ಕಾಯ್ದೆಯಡಿ ಅತ್ಯಾಚಾರಿಗಳಿಗೆ ಸದ್ಯ ಕನಿಷ್ಠ 7 ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದ್ದು, ಈ ತಿದ್ದುಪಡಿ ಬಳಿಕ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತೆ.

ಉನ್ನಾವೋ ಮತ್ತು ಕಥುವಾ ಅತ್ಯಾಚಾರ ಘಟನೆಗಳ ಬಳಿಕ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಸಾರ್ವಜನಿಕರಿಂದ ಒತ್ತಡವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ತುರ್ತು ಸಚಿವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜೊತೆಗೆ ಅತ್ಯಾಚಾರ ಪ್ರಕರಣಗಳ ಶೀಘ್ರ ತನಿಖೆಗೂ ಕೇಂದ್ರ ಸಂಪುಟ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, 16 ವರ್ಷದ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು 10ರಿಂದ 20ವರ್ಷಕ್ಕೆ ಏರಿಸಲೂ ನಿರ್ಣಯಿಸಿದೆ.