SHARE

ಬೆಳಗಾವಿ: ಕಾಂಗ್ರೆಸ್ & ಬಿಜೆಪಿ ಪಕ್ಷಗಳು ವಾಕ್ ಸ್ವಾತಂತ್ರ್ಯವನ್ನೇ ಕಸಿದುಕೊಂಡಿವೆ ಎಂದು AIMIM ಅಧ್ಯಕ್ಷ ಹಾಗೂ ಸಂಸದ ಅಸಾವುದ್ದೀನ್ ಓವೈಸಿ ಆಕ್ರೋಶಭರಿತ ವ್ಯಂಗ್ಯವಾಡಿದರು.ಇಂದು ನಗರದ ಸಿಪಿಎಡ್ ಮೈದಾನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ ಪೊಲೀಸರ ಮೇಲೆ ಒತ್ತಡ ಹಾಕಿ ನನ್ನನ್ನು ಕರ್ನಾಟಕದಲ್ಲಿ ಪ್ರವೇಶಿಸದಂತೆ ಕಾಂಗ್ರೆಸ್ ಕಳೆದ ಮೂರು ವರ್ಷದಿಂದ ಕಿರುಕುಳ ನೀಡಿದೆ. ಕಾಂಗ್ರೆಸ್ ಸದ್ಯದಲ್ಲೇ ಮನೆಗೆ ಹೋಗುವುದರಿಂದ ನನ್ನನ್ನು ಬರದಂತೆ ತಡೆಯಲು ಸಾಧ್ಯವಿಲ್ಲ ಎಂದರು.

ರಾಹುಲ್ ಗಾಂಧಿ ಸೆಕ್ಯುಲಿರಿಸಂ ಅಂಗಡಿ ಇಟ್ಟುಕೊಂಡಿದ್ದರೆ, ಮೋದಿ ನ್ಯಾಶನಲಿಸಂ ಅಂಗಡಿ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಬ್ಬರೂ ನಿಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ನನ್ನೊಂದಿಗೆ ಕೇವಲ 5 ನಿಮಿಷ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು. ಸೆಕ್ಯುಲರ್ ಯಾರು & ಕಮ್ಯುನಲ್ ಯಾರು ಎಂಬುವುದು ದೇಶವಾಸಿಗಳಿಗೆ ಗೊತ್ತೇ ಇದೆ. ಮೋದಿ ಮತ್ತು ರಾಹುಲ್ ಒಂದು AC ರೂಮಿನಲ್ಲಿ ಕುಳಿತು ನೀವೆತ್ತ ಸಾಗಿದ್ದೀರಿ ಎಂಬ ಬಗ್ಗೆ ಚರ್ಚೆ ಮಾಡಿಕೊಳ್ಳಿರಿ ಎಂದು ಓವೈಸಿ ಇಬ್ಬರೂ ರಾಷ್ಟ್ರನಾಯಕರಿಗೆ ಸಲಹೆ ನೀಡಿದರು.ಸ್ವತಃ ಸಲ್ಮಾನ್ ಖುರ್ಷಿದ್ ಅವರೇ ಕಾಂಗ್ರೆಸ್ ನ ‘ಕೈ’ಯಲ್ಲಿ ಮುಸ್ಲಿಂರ ರಕ್ತ ತುಂಬಿದೆ ಎಂದು ಬಹುಹಿಂದೆಯೇ ಹೇಳಿದ್ದಾರೆ. ಕಾಂಗ್ರೆಸ್ ನ ಶಕ್ತಿ ಮುಸ್ಲಿಂರ ಬಳಿ ಇರುವುದಾದರೆ ನೀವು ಮುಸ್ಲಿಂರಿಗೆ ಯಾವ ನ್ಯಾಯ ನೀಡಿದ್ದೀರಿ ಎಂದು ರಾಹುಲ್ ಗೆ ಪ್ರಶ್ನಿಸಿದರು. ದೇಶದಲ್ಲಿ ಮೈನಾರಿಟಿಗಳಿಗೆ ಅಷ್ಟೇ ಅಲ್ಲ ಬದಲಾಗಿ ಎಲ್ಲ ಜಾತಿ ಧರ್ಮದಲ್ಲಿನ ಶೋಷಿತ ವರ್ಗಗಳಿಗೆ ಇಂದು ರಾಜಕೀಯ ಅಧಿಕಾರ ಸಿಗಬೇಕಿದೆ. ಆದರೆ ಉದ್ದೇಶಪೂರ್ವಕವಾಗಿ ಶೋಷಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಧರ್ಮಿಯರನ್ನು ರಾಜಕೀಯ ಮುನ್ನೆಲೆ & ಅಧಿಕಾರದಿಂದ ವಂಚಿಸಲಾಗುತ್ತಿದೆ ಎಂದು ಅಸಾವುದ್ದೀನ್ ಖೇದ ವ್ಯಕ್ತಪಡಿಸಿದರು.

ರಾಜಕೀಯ ಅಧಿಕಾರ ಪಡೆಯಬೇಕಾದರೆ 3rd Front ಪ್ರಾದೇಶಿಕ ಪಕ್ಷಗಳು ದೇಶಾದ್ಯಂತ ಒಂದಾಗಬೇಕು. JDS, ಸಮಾಜವಾದಿ, ಬಿಎಸ್ಪಿ, ಮಾಯಾವತಿ, ಚಂದ್ರಬಾಬು ನಾಯ್ಡು, ಎಐಡಿಎಂಕೆ ಯಂತಹ ಎಲ್ಲ ಪಕ್ಷಗಳು ಒಗ್ಗೂಡಿದಾಗ ಮಾತ್ರ ಮೋದಿಯನ್ನು ಸೋಲಿಸಬಹುದು ಎಂದರು.

ನಾನು ಬೆಳಗಾವಿಗೆ ಬಂದು ಓಟ್ ಒಡೆಯುತ್ತೇನೆ ಎಂಬ ಕಾರಣವೊಡ್ಡಿ ಕಾಂಗ್ರೆಸ್ ಪಾರ್ಟಿ ನನ್ನ ಫೋಟೊಗಳನ್ನು whatsappನಲ್ಲಿ ಬಿಟ್ಟು ಪ್ರಚಾರ ಮಾಡುತ್ತಿದೆ. ನಾನು ಮದುವೆಯಾಗಿ ಮಕ್ಕಳನ್ನು ಹೊಂದಿದವನು. ನನ್ನ ಫೋಟೊ ಬದಲು ಮದುವೆಯಾಗದ ನವಯುವಕರ ಫೋಟೊ ಹಾಕಿದ್ದರೆ ಕಾಂಗ್ರೆಸ್ ಗೆ ಒಳ್ಳೆಯದಾಗುತ್ತಿತ್ತು ಎಂದರು. ನಾವು ನಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾಗುತ್ತದೆ ಎಂದರು.

ಉತ್ತರ ಪ್ರದೇಶ ಬಿಟ್ಟರೆ ಹೆಚ್ಚು ಕ್ರೈಂ ರೆಕಾರ್ಡ್ ಕರ್ನಾಟಕದಲ್ಲಿದೆ. ಸಿದ್ದರಾಮಯ್ಯ ಅವರೇ ಇದಕ್ಕೇನು ಹೇಳುತ್ತೀರಿ ಎಂದು ಸಿಎಂಗೆ ಪ್ರಶ್ನಿಸಿದರು. ರಾಜ್ಯದಲ್ಲಿ ದಕ್ಷ ಆಡಳಿತವಿದ್ದಿದ್ದರೆ ಅಪರಾಧಗಳು ಹೆಚ್ಚಾಗುತ್ತಿರಲಿಲ್ಲ ಎಂದರು.ಟಿಪ್ಪು ಜಯಂತಿ ಬೇಡ:ಟಿಪ್ಪು ಸುಲ್ತಾನ ಸೂರ್ಯ ಚಂದ್ರರು ಇರುವವರೆಗೆ ಶೂರನೆಂದೆ ಪ್ರಖ್ಯಾತಿ ಇರುತ್ತಾನೆ. ಟಿಪ್ಪು ಜಯಂತಿ ಮಾಡಿ ರಾಜ್ಯ ಸರಕಾರ ಯಾವ ಪುರುಷಾರ್ಥ ಮೆರೆಯಬೇಕಿದೆ. ಜನರಿಗೆ ಶಿಕ್ಷಣ, ಒಳ್ಳೆಯ ಆಚಾರ-ವಿಚಾರ & ಉದ್ಯೋಗದ ಅವಶ್ಯಕತೆ ಇದ್ದಾಗ ಜಯಂತಿ ಮಾಡುವುದರ ಹಿಂದಿನ ಕಾಂಗ್ರೆಸ್ ಉದ್ದೇಶವೇನು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಟಿಪ್ಪು ವಿಶ್ವವಿದ್ಯಾಲಯ ತೆರೆಯಲಿದ್ದಾರೆ. ಜತೆಗೆ ಬಡ ಅಲ್ಪಸಂಖ್ಯಾತರಿಗೆ ಹಾಸ್ಟೇಲ ಶಿಕ್ಷಣ ಮತ್ತು ಉದ್ಯೋಗ ಭರವಸೆ ನೀಡಿರುವುದು ಸ್ವಾಗತಾರ್ಹ ಎಂದರು.

ತ್ರಿಪಲ್ ತಲಾಖ್: ಈ ಬಿಲ್ ಸಂಸತ್ತಿನಲ್ಲಿ ಮಂಡನೆಗೆ ಬಂದಿದ್ದು ಇದು ಸಂವಿಧಾನದ ಆರ್ಟಿಕಲ್ 14& 15 ರ ಸ್ಪಷ್ಟ ವಿರೋಧಿ ಕಾನೂನು ಎಂದರು.
ಕರ್ನಾಟಕದಲ್ಲಿ ಖಂಡಿತವಾಗಿಯೂ ಪ್ರಾದೇಶಿಕ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಲ್ಲ ಮುಸ್ಲಿಂ ಮತ್ತು ಶೋಷಿತ ವರ್ಗಗಳು ಜೆಡಿಎಸ್ ಗೆ ಬೆಂಬಲ ಕೊಡಬೇಕು ಎಂದು ಓವೈಸಿ ಕರೆ ನೀಡಿದರು.

…ಮೈ ನ ಕಾವುಂಗಾ, ನ ಕಾನೆ ದುಂಗಾ… ಎಂಬ ಮೋದಿ ವಾಕ್ಯ ಅಸಂಬಂದ್ದವಾಗಿದ್ದು ನೀರವ್ ಮೋದಿ, ವಿಜಯ ಮಲ್ಯ ದೇಶ ಲೂಟಿ ಮಾಡಿ ಓಡಿದ್ದು ಹೇಗೆ ಎಂದು ಪ್ರಶ್ನಿಸಿದರು. ಜಮ್ಮ‌ ಕಾಶ್ಮೀರದಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲಿಲ್ಲ ಎಂದರು.ಧರ್ಮ ಮುಖಂಡ ಸಿಕೆಎಸ್ ನಜೀರ್ ಮಾತನಾಡಿ ನಾವೆಲ್ಲ ಕಾಂಗ್ರೆಸ್ ಬೆನ್ನಿಗೆ ಇಲ್ಲಿಯವರೆಗೆ ಇದ್ದೇವು. ಆದರೆ ಫಿರೋಜ್ ಸೇಠ್ ಎಂಬಾತನಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಬೇಡ ಎಂದರೂ ಹೈಕಮಾಂಡ ಆತನಿಗೇ ಟಿಕೇಟ್ ಕೊಟ್ಟಿದ್ದರಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಇಂದು ಎಲ್ಲ ಮುಸ್ಲಿಂರು ಬೆಂಬಲ ಕೊಟ್ಟಿದ್ದೇವೆ. ಅವಶ್ಯಕತೆ ಬಿದ್ದರೆ RSSನ ಮೋಹನ ಭಾಗವತ್ ಅವರೊಂದಿಗೆ ಬೇಕಾದರೆ ಮಾತನಾಡುವೆವು ಆದರೆ ಕಾಂಗ್ರೆಸ್ ನೊಂದಿಗೆ ನಮ್ಮ ಸಖ್ಯ ಮುಗಿಯಿತು ಎಂದು ನಜೀರ್ ಘೋಷಿಸಿದರು. ಅಭ್ಯರ್ಥಿಗಳಾದ ಶಿವನಗೌಡ ಪಾಟೀಲ, ಅಶ್ಫಾಕ್ ಅಹ್ಮದ್ ಮಡಕಿ, ಶಂಕರ ಮಾಡಲಗಿ, ಉಸ್ಮಾನ್ ಗಣಿ,ಲತೀಫ್ಖಾನ ಪಠಾಣ ಮತ್ತಿತರರು ಮಾತನಾಡಿದರು.

ಫೈಜುಲ್ಲಾ ಮಾಡಿವಾಲೆ, ಸಯ್ಯದ್ ಮನ್ಸೂರ್, ಜಯಂತ, ಡಾ. ಯೂಸೂಫ್, ಸಂತೋಷ ಉಪಾಧ್ಯಾಯ, ಗೌಸ್, ಫಿರ್ದೋಸ್, ಕಲಿಮ ಮಾಡಿವಾಲೆ ಇತರರು ಉಪಸ್ಥಿತರಿದ್ದರು.