SHARE

ಬೆಳಗಾವಿ: ಕಳೆದ ಎರಡ್ಮೂರು ದಿನಗಳಿಂದ ನಗರದ ಪ್ರತಿ ಮನೆಯಲ್ಲಿ ಈಗ ದೇಶ ವಿರೋಧಿ ಘೋಷಣೆಗಳ ವಿಷಯ ಚರ್ಚೆಯಾಗುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಆತಂಕ ವ್ಯಕ್ತಪಡಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗುವ ಜನರು ಮತ್ತು ಅಲ್ಲಿದ್ದ ಶಾಸಕ ಫಿರೋಜ್ ಸೇಠ್ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ಪಾಕಿಸ್ತಾನದ ಪರವಾಗಿ ದೇಶವಿರೋಧಿ ಘೋಷಣೆ ಕೂಗಿರುವವರ ಮೇಲೆ ಕೂಡಲೇ ಸರಕಾರ ಗುಂಡು ಹಾಕಬೇಕಾಗಿತ್ತು ಎಂದು ಆಕ್ರೋಶ ಭರಿತರಾಗಿ ಸುರೇಶ ಅಂಗಡಿ ಕಳವಳ ವ್ಯಕ್ತಪಡಿಸಿದರು.

ಶಾಸಕ ಫಿರೋಜ್ ಸೇಠ್ ನನ್ನ ಬಗ್ಗೆ ಮತ್ತು ಪಕ್ಷದ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ‌. ಬೆಳಗಾವಿ ಅಭಿವೃದ್ಧಿಗೆ ಮೊಟ್ಟಮೊದಲು ಯಡಿಯೂರಪ್ಪ ಸರಕಾರ ₹೧೦೦ಕೋಟಿ ಹಣ ಕೊಟ್ಟಿದೆ ಎಂಬುವುದನ್ನು ಸೇಠ್ ಅರಿಯಲಿ ಎಂದು ಎಚ್ಚರಿಸಿದರು. ದೇಶದಲ್ಲಿ ಇದ್ದುಕೊಂಡು ಮಾತೃ ದೇಶದ ವಿರುದ್ದವೇ ಘೋಷಣೆ ಕೂಗುತ್ತಾರೆ. ಆದರೂ ಸರಕಾರ & ಆಡಳಿತ ಸುಮ್ಮನಿರುತ್ತದೆ ಎಂದರೆ ಏನರ್ಥ ಎಂದು ಅಂಗಡಿ ಪ್ರಶ್ನಿಸಿದರು. ಶಾಸಕ ಫಿರೋಜ್ ಸೇಠ್ ಕಿರಿಕಿರಿ ಬಹಳ ಆಗಿದೆ. ಅಜಂ ನಗರ ಪ್ರದೇಶದಲ್ಲಿ ಸ್ಕಿಲ್ ಡೆವಲಪ್ಮೆಂಟ್ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಅವರ ಫೊಟೊ ಹಾಕಲು ಅಲ್ಲಿನ ಜನತೆಗೆ ಈ ಸೇಠ್ ಬಿಟ್ಟಿಲ್ಲ ಎಂದರು. ಮಿಸ್ಟರ್ ಫಿರೋಜ್ ಸೇಠ್ ಬಿಜೆಪಿಯ ಯೋಜನೆಗಳನ್ನು; ನಮ್ಮ ಯೋಜನೆಗಳು ಎಂದು ಜಾಹೀರಾತು ಕೊಡುವುದನ್ನು ಕೂಡಲೇ ನಿಲ್ಲಿಸಿ ಎಂದರು.

ಹಿರಿಯ ನ್ಯಾಯವಾದಿ ಎಂ. ಬಿ. ಝಿರಲಿ ಮಾತನಾಡಿ ಕಳೆದ ಹತ್ತು ವರ್ಷದಲ್ಲಿ ಬೆಳಗಾವಿ ಅಶಾಂತಿ ನಗರವಾಗಿತ್ತು. ಆಟಾಟೋಪ ನಡೆಯುತ್ತ ಬಂದಿದೆ. ಜತೆಗೆ ಈಗ ‘ಪಾಕಿಸ್ತಾನ ಜಿಂದಾಬಾದ್’ ಎನ್ನುವ ಹಂತಕ್ಕೆ ಬಂದಿದ್ದಾರೆ. ದೇಶವಿರೋಧಿಗಳ ವಿರುದ್ಧ ಬೆಳಗಾವಿಯ ವಕೀಲರ ಗುಂಪು ಕೊಟ್ಟ ದೂರಿನನ್ವಯ ಫಿರೋಜ್ ಸೇಠ್ ಮೊದಲ ಪಾರ್ಟಿಯಾಗಿ ದೂರು ದಾಖಲಾಗಿದೆ. ಆದರೂ ಫಿರೋಜ್ ಸೇಠ್ ಅವರು ದುರಹಂಕಾರದ ಮಾತಾಡಿದ್ದಾರೆ. ದೇಶ ವಿರೋಧಿ ಹೇಳಿಕೆ ನೀಡಿರುವವರ ವಿರುದ್ದ, ಫಿರೋಜ್ ಸೇಠ್ ಘಟನೆಯನ್ನು ಖಂಡಿಸಲಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಬೆದರಿಸುವ ಧಾಟಿಯಲ್ಲಿ ಮಾತನಾಡಿರುವ ಫಿರೋಜ್ ಸೇಠ್ ಗೆ ಹೆದರುವವರು ಯಾರೂ ಬಿಜೆಪಿಯಲ್ಲಿಲ್ಲ ಎಂದು ಎಂ. ಬಿ. ಝಿರಲಿ ಶಾಸಕ ಫಿರೋಜ್ ಸೇಠ್ ಗೆ ಎದುರುತ್ತರ ನೀಡಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ ಫಿರೋಜ್ ಸೇಠ್ ನಮ್ಮ ದೇಶದ ನಾಗರಿಕನೇ ಎಂಬ ಪ್ರಶ್ನೆ ಈಗ ಮೂಡಿದೆ. ಇಂಥ ವ್ಯಕ್ತಿ ಮತ್ತೆ ಶಾಸಕನಾದರೆ ಏನು ಪರಿಸ್ಥಿತಿ ಎಂದು ಡಾ. ಕೋರೆ ಕಳವಳ ವ್ಯಕ್ತಪಡಿಸಿದರು. ಅನಿಲ ಬೆನಕೆ, ರಾಜೇಂದ್ರ ಹರಕುಣಿ ಇತರರು ಉಪಸ್ಥಿತರಿದ್ದರು.