SHARE

ವಿಶೇಷ ಬರಹ: ಅಶೋಕ್ ಚಂದರಗಿ

ರಾಜ್ಯ ಸರಕಾರಗಳು ಅಸ್ಥಿರಗೊಂಡಾಗ,ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣಗೊಂಡ ಸಂದರ್ಭದಲ್ಲಿ ರಾಜ್ಯಪಾಲರ ಪಾತ್ರ ಮುನ್ನೆಲೆಗೆ ಬಂದು ಬಿಡುತ್ತದೆ. ಎಲ್ಲವನ್ನೂ ತಮ್ಮ ವಿವೇಚನೆಗೆ ತಕ್ಕಂತೆ ರಾಜ್ಯಪಾಲರು ನಿರ್ಧರಿಸಿಬಿಡುತ್ತಾರೆ.ಒಂದು ರಾಜ್ಯದ ರಾಜ್ಯಪಾಲರು ಕೈಕೊಂಡ ನಿರ್ಧಾರವನ್ನು ಮತ್ತೊಂದು ರಾಜ್ಯದ ರಾಜ್ಯಪಾಲರು ಅನುಸರಿಸಬೇಕೆಂದೇನೂ ಇಲ್ಲ. ಇವರಿಗೆ ಹೀಗೇ ಮಾಡಬೇಕೆಂಬ ಕಟ್ಟಳೆಗಳೇನೂ ಇಲ್ಲ. ಆದರೆ 1989 ರ ಎಪ್ರಿಲ್ ತಿಂಗಳಲ್ಲಿ ಕರ್ನಾಟಕದ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರು ಎಸ್.ಆರ್.ಬೊಮ್ಮಾಯಿ ಸರಕಾರವನ್ನು ವಜಾ ಮಾಡಿದ್ದನ್ನು ಮಾತ್ರ ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು. 1991 ರಲ್ಲಿ ಹೊರಬಂದ ತೀರ್ಪಿನಲ್ಲಿ,” ಒಂದು ಸರಕಾರದ ಬಹುಮತದ ತೀರ್ಮಾನ ವಿಧಾನ ಸಭೆಯೊಳಗೆ ಆಗಬೇಕೆ ಹೊರತು ರಾಜಭವನದಲ್ಲಿ ಅಲ್ಲ” ಎಂದು ಸ್ಪಷ್ಟಪಡಿಸಲಾಯಿತು.

ಇಂಥ ಐತಿಹಾಸಿಕ ತೀರ್ಪು ಬಂದ ನಂತರವಷ್ಟೆ ರಾಜ್ಯಪಾಲರು ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳುವದು ನಿಂತಿತು. ಏನಿದ್ದರೂ ವಿಧಾನ ಸಭೆಯಲ್ಲಿಯೇ ಬಹುಮತದ ಪರೀಕ್ಷೆ ನಡೆಯಲಾರಂಭಿಸಿತು. ಈಗ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರ ಪಾತ್ರ ಮಹತ್ವದ್ದೆನಿಸಿದೆ.ಅವರು ಕೈಕೊಳ್ಳುವ ನಿರ್ಧಾರದತ್ತ ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ.

ಇಂದಿರಾ ಗಾಂಧಿಯವರ ಕಾಲಕ್ಕೆ ರಾಜಭವನಗಳು ಕಾಂಗ್ರೆಸ್ ಕಚೇರಿಗಳಂತೆ ಕೆಲಸ ಮಾಡುತ್ತಿದ್ದವು. ಇಂದಿರಾ ಅಣತಿಯಂತೇ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದರು. ಮುಖ್ಯಮಂತ್ರಿಗಳನ್ನು ಬದಲಿಸುವದು,ಕಿತ್ತು ಹಾಕುವದು ಇಂದಿರಾ ಗಾಂಧಿಯವರಿಗೆ ಚೆಸ್ ಆಟದಂತಿತ್ತು.1984 ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಇಂಥ ಆಟವೊಂದು ಇಂದಿರಾ ಗಾಂಧಿಯವರನ್ನೇ ಮಣಿಸಿತಲ್ಲದೇ ಅವರಿಗೆ ಭಾರೀ ಮುಜುಗರ ಉಂಟು ಮಾಡಿತು. ಕರ್ನಾಟಕದಲ್ಲಿ 1983 ರ ಜನೇವರಿಯಲ್ಲಿ ಹೆಗಡೆಯವರು ಪ್ರಪ್ರಥಮ ಕಾಂಗ್ರೆಸ್ಸೇತರ ಸರಕಾರ ರಚಿಸಿದ ಸಂದರ್ಭದಲ್ಲಿಯೇ ಆಂಧ್ರ ಪ್ರದೇಶದಲ್ಲಿ ಖ್ಯಾತ ತೆಲುಗು ನಟ ಎನ್.ಟಿ.ರಾಮರಾವ ಅವರು ಪ್ರಪ್ರಥಮ ಕಾಂಗ್ರೆಸ್ಸೇತರವಾದ ತೆಲುಗು ದೇಶಮ್ ಪಕ್ಷದ ಸರಕಾರ ರಚಿಸಿದರು. ತೆಲುಗರ ಆತ್ಮಗೌರವ ಕಾಪಾಡಲು ತಮಗೆ ಅಧಿಕಾರ ಕೊಡಿ ಎಂದು ಚುನಾವಣೆ ಕಣಕ್ಕಿಳಿದ ಅವರು 75 ಸಾವಿರ ಕಿ.ಮಿ.” ಚೈತನ್ಯ ರಥ” ಏರಿ ಪ್ರವಾಸ ಮಾಡಿ ಭಾರೀ ಬಹುಮತ ಪಡೆದರು.294 ಸದಸ್ಯ ಬಲದ ವಿಧಾನ ಸಭೆಯಲ್ಲಿ 199 ಸದಸ್ಯರ ಬಹುಮತ ಪಡೆದರು.1984 ರ ಮಧ್ಯ ಭಾಗದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆಂದು ಎನ್ ಟಿ ಆರ್ ಅಮೇರಿಕೆಗೆ ಹೋದಾಗ ಅವರ ವಿರುದ್ಧ ತೆಲುಗು ದೇಶಮ್ ಪಕ್ಷದಲ್ಲಿ ಆಂತರಿಕ ಬಂಡಾಯ ನಡೆಯಿತು.1982 ರಲ್ಲಿ ಆ ಪಕ್ಷ ಸ್ಥಾಪನೆಯಾದಾಗ ಕಾಂಗ್ರೆಸ್ ತ್ಯಜಿಸಿ ಅಲ್ಲಿ ಸೇರಿದ್ದ ನಾಂದ್ಲೇಡ್ ಭಾಸ್ಕರ್ ರಾವ್ ಅವರು ಬಂಡಾಯವೆದ್ದರು.ಈ ಮೂಲ ಕಾಂಗ್ರೆಸ್ ನಾಯಕನಿಗೆ ಇಂದಿರಾ ಗಾಂಧಿಯವರ ಕುಮ್ಮಕ್ಕು.ರಾಜ್ಯಪಾಲ ರಾಮಲಾಲ್ ಅವರು ಎನ್ ಟಿ ರಾಮರಾವ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಹಾಕಿ ಭಾಸ್ಕರ್ ರಾವ್ ಅವರನ್ನು ಗದ್ದುಗೆಗೆ ಕೂಡಿಸಿಬಿಟ್ಟರು!ಎನ್ ಟಿ ಆರ್ ಅಮೇರಿಕೆಯಿಂದ ಮರಳಿದರು.ತಮಗೇ ಬಹುಮತವಿದೆಯೆಂದು ರಾಜಭವನದ ಎದುರು ಪ್ರದರ್ಶನ ನಡೆಸಿದರು.ರಾಮಲಾಲ್ ಜಗ್ಗಲಿಲ್ಲ. ಎನ್ ಟಿ ಆರ್ ಹಿಂದೆ ಸರಿಯಲಿಲ್ಲ. ಅವರೊಂದಿಗೆ ರಾಮಕೃಷ್ಣ ಹೆಗಡೆ,ಬಿಜೆಪಿ ಯ ನಾಯಕರು,ಸಿಪಿಐ,ಸಿಪಿಎಮ್,ಡಿಎಮ್ ಕೆ ನಾಯಕರು ಕೈಜೋಡಿಸಿದರು. ಎನ್ ಟಿ ಆರ್ ಬೆಂಬಲಿಸುವ ಶಾಸಕರನ್ನು ಇಂದಿರಾ ಗಾಂಧಿ ಒಡೆದುಕೊಳ್ಳಬಾರದೆಂದು ಆ ಶಾಸಕರನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ರಕ್ಷಣೆಯಲ್ಲಿ ಇಡಲಾಯಿತು.ಎನ್ ಟಿ ಆರ್ ಅವರು ಮತ್ತೊಮ್ಮೆ ಚೈತನ್ಯ ರಥ ಏರಿ ” ಜನತಂತ್ರ ರಕ್ಷಿಸಿ” ಆಂದೋಲನ ನಡೆಸಿದರು.ತಮ್ಮ ಶಾಸಕರನ್ನು ಕರೆದುಕೊಂಡು ದಿಲ್ಲಿಗೆ ಒಯ್ದ ಎನ್ ಟಿ ರಾಮರಾವ ಅವರು ಬಲಪ್ರದರ್ಶನ ಮಾಡಿದರು. ಇಂದಿರಾ ಗಾಂಧಿಯವರಿಗೆ ಭಾರೀ ಮುಜುಗರವಾಯಿತು. ದೇಶದಾದ್ಯಂತ ಈ ಘಟನೆ ಭಾರೀ ಸುದ್ದಿಯಾಯಿತು. ಈ ಒತ್ತಡಕ್ಕೆ ಮಣಿದ ಇಂದಿರಾ ಗಾಂಧಿಯವರು ಆಂಧ್ರದ ರಾಜ್ಯಪಾಲ ರಾಮಲಾಲರನ್ನು ಕಿತ್ತು ಹಾಕಿ ಶಂಕರ ದಯಾಳ ಶರ್ಮಾರನ್ನು ನೇಮಿಸಿದರು.ಶರ್ಮಾ ಅವರು ನಾಂದ್ಲೇಡ್ ಭಾಸ್ಕರರಾವ್ ಅವರನ್ನು ತೆಗೆದು ಹಾಕಿ ಎನ್ ಟಿ ರಾಮರಾವ ಅವರನ್ನು ಮರಳಿ ಸಿಎಮ್ ಗದ್ದುಗೆಗೆ ಕೂಡಿಸಿದರು.! ರಾಜ್ಯಪಾಲರು ಆಗಲೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಪಕ್ಷದ ಮಾತು ಕೇಳುತ್ತಿದ್ದರು,ಈಗಲೂ ಕೇಳುತ್ತಾರೆ.ಈ ಹುದ್ದೆಗೆ ಆ ಪಕ್ಷಗಳಲ್ಲಿ ಕೆಲಸ ಮಾಡಿದ ನಿಷ್ಠಾವಂತರನ್ನೇ ನೇಮಿಸಲಾಗುತ್ತದೆ.

ರಾಜ್ಯಪಾಲ ಹುದ್ದೆಯನ್ನೇ ರದ್ದುಗೊಳಿಸಬೇಕೆಂಬ ವಾದ ದೀರ್ಘ ಕಾಲದಿಂದಲೂ ಇದೆ.ಆದರೆ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳಿಗೂ ಈ ಹುದ್ದೆ ಅನುಕೂಲಕರವಾಗಿ ಪರಿಣಮಿಸಿದೆ.ಅನ್ಯ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ರಾಜಭವನದಲ್ಲಿ ತಮ್ಮವರೊಬ್ಬರನ್ನು ಕೂಡಿಸಿ,” ತಲೆಯ ಮೇಲೆ ತೂಗುವ ಖಡ್ಗ”ಇರಿಸುವ ಪರಂಪರೆಯನ್ನು ಎಲ್ಲ ಪಕ್ಷಗಳೂ ಮಾಡುತ್ತಲೇ ಬಂದಿವೆ!