SHARE

ಬೆಂಗಳೂರು: ರಾಜ್ಯದಲ್ಲಿ ಕೇಂದ್ರದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ ಸರಕಾರ ರಚನೆಗೆ ಮುಂದಾಗಿದ್ದು, ರಾಜ್ಯದಲ್ಲಿ ಕುದುರೆ ವ್ಯಾಪಾರ ಪ್ರಾರಂಭಿಸಿದೆ. ಶಾಸಕರ ಖರೀದಿಗೆ ಭಾರೀ ಆಮಿಷ ಒಡ್ಡಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಧಿಕಾರ ಹಿಡಿಯಲು ಬಿಜೆಪಿ ಅವಸರಿಸುತ್ತಿದ್ದು. ಒಬ್ಬೊಬ್ಬ ಶಾಸಕನಿಗೆ 100 ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನವನ್ನು ನೀಡುವ ಆಮಿಷವನ್ನು ಬಿಜೆಪಿ ಒಡ್ಡಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇಷ್ಟೊಂದು ಹಣ ಇವರಿಗೆ ಎಲ್ಲಿಂದ ಬಂತು. ಇದು ಬ್ಲ್ಯಾಕ್ ಮನಿಯೋ, ವೈಟ್ ಮನಿಯೋ ಎಂಬುದನ್ನು ಜನರು ಪ್ರಶ್ನಿಸಬೇಕಿದೆ. ರಾಜ್ಯಪಾಲರು ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತೀರೋ? ಅಥವಾ ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ವಹಿಸುತ್ತೀರಾ ಎಂದು ಅವರು ಪ್ರಶ್ನಿಸಿದರು

ಬಿಜೆಪಿಯ ವಿಶ್ವಾಸಮತಕ್ಕೆ 8 ಸ್ಥಾನಗಳ ಕೊರತೆ ಇದ್ದು, ಕೇಂದ್ರ ಸರ್ಕಾರದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸರಕಾರ ರಚನೆಗೆ ಮುಂದಾಗಿದೆ. ಮೇಘಾಲಯ, ಮಣಿಪುರದಲ್ಲಿ ಇದೇ ರೀತಿಯಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಿ ಸರಕಾರ ರಚಿಸಿದೆ ಎಂದು ತಿಳಿಸಿದ್ದಾರೆ.