SHARE

ವಿಶೇಷ ಬರಹ: ಅಶೋಕ್ ಚಂದರಗಿ

ಬೆಳಗಾವಿ: ವಿಧಾನ ಸಭೆಯಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ಯಡಿಯೂರಪ್ಪ ಸೋತಿದ್ದಾರೆ. ಜನಮತ ಬಿಜೆಪಿ ಪರವಾಗಿದ್ದರೂ ನಂಬರ್ ಗೇಮ್ ನಲ್ಲಿ ಆ ಪಕ್ಷ ಸೋತಿದೆ. ಇನ್ನೇನಿದ್ದರೂ ಕುಮಾರಸ್ವಾಮಿ ಆಡಳಿತ. 2006 ರಲ್ಲಿ ಅಲ್ಪಾವಧಿ ಆಡಳಿತ ನಡೆಸಿ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡ ಅವರಿಗೆ ತಮ್ಮದೇ ಆದ ಯೋಜನೆಗಳಿವೆ, ವಿಚಾರಗಳಿವೆ. ಕಳೆದ 13 ವರ್ಷಗಳಿಂದ ಅವರನ್ನು ಸಮೀಪದಿಂದ ಬಲ್ಲ ನಾನು ಕಳೆದ ನವ್ಹೆಂಬರ್ ಬೆಳಗಾವಿ ಅಧಿವೇಶನದ ಕಾಲಕ್ಕೆ ಜೆ ಎನ್ ಎಮ್ ಸಿ ಕ್ವಾರ್ಟರ್ಸ್ ದಲ್ಲಿ ಭೆಟ್ಟಿಯಾಗಿ ಅರ್ಧ ಗಂಟೆ ಕಾಲ ಮಾತನಾಡಿದ್ದೂ ಉಂಟು.

2006 ರ ಫೆಬ್ರುವರಿ 3 ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು ಅದೇ ತಿಂಗಳು 16 ರಂದು ವಿಧಾನ ಸೌಧದಲ್ಲಿ ನಾಡು,ನುಡಿ ಮತ್ತು ಗಡಿಯ ಕುರಿತು ಚರ್ಚಿಸಲು ಆಹ್ವಾನಿಸಿದರು. ನಾನೂ ಹೋಗಿದ್ದೆ. ಅದೇ ದಿನ ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಗೆ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದೆ. ಮೂರೇ ತಿಂಗಳಲ್ಲಿ ಮಂಜೂರು ಮಾಡಿ ಎಪ್ರಿಲ್ 7 ರಂದು ಆದೇಶ ಕಳಿಸಿದರು.

ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ತಲೆ ಎತ್ತಿದ ಬೂಡಾ ನೂತನ ಯೋಜನೆಗೆ ಕುಮಾರಸ್ವಾಮಿ ಲೇಔಟ್ ಎಂದು ಹೆಸರಿಡಬೇಕೆಂದು ನಾನು ಅಂದಿನ ಬೂಡಾ ಆಯುಕ್ತ ಶ್ರೀ ಡಿ.ಬಿ.ನಾಯಕ ಅವರಿಗೆ ಮನವಿ ಕೊಟ್ಟೆ. ಶಾಸಕ ಶ್ರೀ ಅಭಯ ಪಾಟೀಲ ಬೆಂಬಲಿಸಿದರು. ತಮ್ಮ ಹೆಸರಿಡುವ ಸಮಾರಂಭಕ್ಕೆ ಬರಲು ಅವರು ಹಿಂದೇಟು ಹಾಕಿದರು. ಯಡಿಯೂರಪ್ಪ ಒಪ್ಪಿದ್ದರು. ಆದರೆ ಅಂದಿನ ಬೂಡಾ ಅಧ್ಯಕ್ಷರು ಅವರನ್ನು ಕರೆತರಲಿಲ್ಲ. ಬೆಳಗಾವಿಯ ಜೆ ಎನ್ ಎಮ್ ಸಿ ಆವರಣದಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದ ಕಾಲಕ್ಕೆ ಈ ನಾಮಕರಣ ಸಮಾರಂಭ ನಿಗದಿಯಾಗಿತ್ತು. ಕೊನೆಗೆ ಅಭಯ ಪಾಟೀಲರೇ ಕುಮಾರಸ್ವಾಮಿ ಲೇಔಟ್ ಉದ್ಘಾಟಿಸಿದರು.

2006 ರ ಮೇ 7 ರಿಂದ 13 ರವರೆಗೆ ಬೆಳಗಾವಿಯ ಸರ್ದಾರ್ಸ ಹೈಸ್ಕೂಲ್ ಮೈದಾನದಲ್ಲಿ ಗಡಿ ಸಮ್ಮೇಳನ ನಡೆಯಿತು. ಕುಮಾರಣ್ಣ ಆಸಕ್ತಿ ವಹಿಸಿ ಇದನ್ನು ಆಯೋಜಿಸಿದ್ದರು. ಯಡಿಯೂರಪ್ಪ ಉಪಮುಖ್ಯಮಂತ್ರಿ. ಶಾಲಿನಿ ರಜನೀಶ ಡಿಸಿ. ಹೇಮಂತ ನಿಂಬಾಳ್ಕರ್ ಎಸ್.ಪಿ. ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಬೇಕೆಂಬ ನಿರ್ಧಾರವನ್ನು ಕುಮಾರಸ್ವಾಮಿ ಪ್ರಕಟಿಸಿದಾಗ ಯಡಿಯೂರಪ್ಪ ಅಮೇರಿಕೆಯಲ್ಲಿದ್ದರು. ಪ್ರಭಾಕರ ಕೋರೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ನಿರ್ಧಾರ ಕೈಗೊಂಡ ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ಬೆಳಗಾವಿಗರಾಗಿಯೇ ಓಡಾಡಿದರು.

ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸುವ ವಿಷಯದಲ್ಲೂ ಅಷ್ಟೆ. ಗೃಹ ಸಚಿವ ದಿ.ಎಮ್.ಪಿ.ಪ್ರಕಾಶ ನೇತೃತ್ವದ ಸಮಿತಿಯನ್ನು ಬೆಳಗಾವಿಗೆ ಕಳಿಸಿದ ಅವರು ಯಾವದೇ ಒತ್ತಡಕ್ಕೂ ಮಣಿಯದೇ ಬೆಳಗಾವಿ ಕನ್ನಡ ಸಂಘಟನೆಗಳ ಇಚ್ಛೆಯಂತೆಯೇ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೇ ಅದನ್ನು ಕಟ್ಟಲು ನಿರ್ಧರಿಸಿದರು. ಅವರನ್ನು ರಾತ್ರಿ 11ಕ್ಕೂ ಭೆಟ್ಟಿಯಾಗಬಹುದಿತ್ತು. ಮೊನ್ನೆ ಮನೆಗೆ ಹೋದ ಸಿದ್ರಾಮಣ್ಣ ಅವರನ್ನು ಹಗಲು ಸಹ ಭೆಟ್ಟಿಯಾಗಲು ಸಾಧ್ಯವಾಗಿರಲಿಲ್ಲ. ಐದು ವರ್ಷದ ಕೊನೆಗೆ ಕಳೆದ ನವ್ಹೆಂಬರ್ ಅಧಿವೇಶನದ ಕಾಲಕ್ಕೆ ಜಿಲ್ಲಾಧಿಕಾರಿ ಜಿಯಾಉಲ್ಲಾ ಅವರ ಮೂಲಕ ನಾನು ಸಿದ್ರಾಮಣ್ಣ ಅವರ ಸಮಯ ನಿಗದಿ ಮಾಡಿಸಿಕೊಂಡು 45 ನಿಮಿಷ ಚರ್ಚಿಸಬೇಕಾಯಿತು. ಕುಮಾರಸ್ವಾಮಿ ಅವರಿಗೆ ಒಂದು ಕೊರಗಿದ್ದೇ ಇದೆ. ಉತ್ತರ ಕರ್ನಾಟಕದ ಬಗ್ಗೆ, ಬೆಳಗಾವಿ ಗಡಿಯ ಬಗ್ಗೆ, ನಾಡು ನುಡಿಯ ಬಗ್ಗೆ ತಾವು ಎಷ್ಟೊಂದು ಕಾಳಜಿ ವಹಿಸಿದರೂ ಇಲ್ಲಿ ತಮ್ಮ ಪಕ್ಷಕ್ಕೆ ಮತಗಳು ಸಿಗುತ್ತಿಲ್ಲವೇಕೆ? ಎಂಬ ಅಸಮಾಧಾನ ಅವರಲ್ಲಿ ಮಡುಗಟ್ಟಿದೆ. ಅದಕ್ಕೆ ಅನೇಕ ರಾಜಕೀಯ ಕಾರಣಗಳಿವೆ.ರಾಜ್ಯದ ರೈತರ ಸಾಲ ಮನ್ನಾ ಮಾಡುವದಕ್ಕಿಂತಲೂ ಅವರು ಸಾಲಗಾರರಾಗದಂತೆ ಮಾಡುವದು ಅವರ ತಲೆಯಲ್ಲಿದೆ. ಇಸ್ರೇಲಿಗೆ ಹೋಗಿ ಅಲ್ಲಿಯ ಕೃಷಿ ಪದ್ಧತಿಯ ಅಧ್ಯಯನ ಮಾಡಿರುವ ಅವರು ಇಲ್ಲಿಯೂ ವೈಙ್ಞಾನಿಕ ಪದ್ಧತಿಯನ್ನು ಜಾರಿಗೊಳಿಸುವ ವಿಚಾರ ಹೊಂದಿದ್ದಾರೆ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ ಆಡಳಿತದಲ್ಲಿ ಅವರಿಗೆ ಮುಕ್ತ ಹಸ್ತ ನೀಡುವದೊ ಎಂಬುದನ್ನು ಕಾದು ನೋಡಬೇಕು. ಯಡಿಯೂರಪ್ಪ ವಿಶ್ವಾಸ ಮತದಲ್ಲಿ ಸೋತು ಮನೆಗೆ ಮರಳಿದ್ದು ಕೇವಲ ಕಾಂಗ್ರೆಸ್ ನವರಿಗೆ ಸಂತಸ ತಂದಿದೆಯೆಂದು ನೀವು ತಿಳಿದಿದ್ದರೆ ತಪ್ಪು. ಬಿಜೆಪಿ ಯಲ್ಲಿಯೇ ಒಂದು ವರ್ಗ ವೂ ಖುಷಿ ಪಟ್ಟಿದೆ. ಅದೇ ರೀತಿ ಕುಮಾರಸ್ವಾಮಿ ನಾಯಕತ್ವದಲ್ಲಿ ಕೆಲಸ ಮಾಡುವದೂ ಕಾಂಗ್ರೆಸ್ಸಿನ ಒಂದು ದೊಡ್ಡ ಗುಂಪಿಗೇ ಇಷ್ಟವಾಗದ ಸಂಗತಿ. ಇದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗುತ್ತ ಹೋಗುತ್ತದೆ.ಜೆಡಿಎಸ್ ಕಾಂಗ್ರೆಸ್ ಜಂಟೀ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಮೋದಿ ಸರಕಾರ ಹಲವಾರು ತಂತ್ರಗಳನ್ನು ಹೆಣೆಯಲು ಆರಂಭಿಸುವ ಸೂಚನೆಗಳು ಈಗಾಗಲೇ ಬೆಂಗಳೂರಿನಲ್ಲಿ ಸಿಗಲಾರಂಭಿಸಿವೆ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಮುನ್ನವೇ ರಾಜ್ಯದಲ್ಲಿ ರಾಜಕೀಯ ಪಲ್ಲಟ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ವರ್ಷಾಂತ್ಯದಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಲೋಕಸಭೆ ಮತ್ತು ವಿಧಾನ ಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕೆಂಬ ವಿಚಾರ ಈಗ ಒಂದು ಹಂತ ತಲುಪಿದ್ದು ಕರ್ನಾಟಕದಲ್ಲಿ ಮಧ್ಯಾವಧಿ ಚುನಾವಣೆ ನಡೆದರೂ ಅಚ್ಚರಿಯೇನಿಲ್ಲ. ನಾಡು,ನುಡಿ,ಗಡಿ ವಿಚಾರದಲ್ಲಿ ಅಪಾರ ಕಾಳಜಿಯುಳ್ಳ ಕುಮಾರಣ್ಣ ಅವರಿಗೆ ಶುಭವಾಗಲಿ. ಇಂಥ ವ್ಯಕ್ತಿ ರಾಜ್ಯಕ್ಕೆ ಒಳ್ಳೆಯ ಮತ್ತು ಮೌಲ್ಯಾಧಾರಿತ ಆಡಳಿತ ನೀಡಿಯೇ ನೀಡುತ್ತಾರೆ ಎಂಬ ವಿಶ್ವಾಸ,ನಂಬಿಕೆ, ಭರವಸೆ ಇದ್ದೇ ಇದೆ.