SHARE

ಬೆಳಗಾವಿ/ಖಾನಾಪೂರ: ಅಂಗಡಿಗಳಲ್ಲಿ ಪದಾರ್ಥಗಳನ್ನು ಪ್ಲಾಸ್ಟಿಕ್ ನಲ್ಲಿ ತರಲು ಸಮ್ಮತಿ ನೀಡಬೇಡಿ ಎಂದು ಖಾನಾಪುರ ಅರಣ್ಯ ಉಪವಿಭಾಗ ಜನತೆಗೆ ಕರೆ ನೀಡಿದೆ.ಇಂದು ಖಾನಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತ್ಯೇಕ್ ಎರಡು ಪರಿಸರ ಪ್ರಜ್ಞಾ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಜನತೆಗೆ ಇಲಾಖೆ ಮನವಿ ಮಾಡಿತು.ಸಸಿ ನೆಡುವಿಕೆ ಹಾಗೂ ಜಾಥಾಗೆ ಖಾನಾಪುರ ಹಿರಿಯ ನ್ಯಾಯಾಧೀಶೆ ಕೆ. ವಿದ್ಯಾ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶ ಎಂ. ಆನಂದಪ್ಪ ಚಾಲನೆ ನೀಡಿದರು. ನಗರದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ವಿದ್ಯಾರ್ಥಿಗಳ ಬೃಹತ್ ‘ಪರಿಸರ ನಡಿಗೆ’ ಜಾಥಾ ನಡೆಯಿತು. ಪರಿಸರವೇ ನಮ್ಮೆಲ್ಲರ ಉಸಿರಾಗಿದ್ದು, ಇಂದು ಹೆಚ್ಚುತ್ತಿರುವ ಪರಿಸರ ವೈಪರಿತ್ಯಗಳಿಗೆ ಮಾನವನ ಪರಿಸರ ವಿರೋಧಿ ಚಟುವಟಿಕೆಗಳೇ ಕಾರಣ ಎಂದು ನ್ಯಾಯಾಧೀಶೆ ಕೆ. ವಿದ್ಯಾ ಅಭಿಪ್ರಾಯ ಪಟ್ಟರು.ಎಸಿಎಫ್ ಸಿ. ಬಿ. ಪಾಟೀಲ ಮಾತನಾಡಿ ಅಪರೂಪದ ಸಸ್ಯ ಸಂಕುಲ ಮಾನವ ಕುಲದ ಆಸ್ತಿ. ಅದನ್ನು ಅರಣ್ಯ ಇಲಾಖೆ ಮಾತ್ರವಲ್ಲ ದೇಶದ ಪ್ರತಿ ನಾಗರಿಕ ಕಾಯ್ದು ಕಾಪಾಡಿ ಬೆಳೆಬೇಕಿದೆ. ಆದರೆ ಇಂದು ವಾಣಿಜ್ಯ ಕಾರಣಕ್ಕೆ ಕಳ್ಳಭೇಟೆ, ಟಿಂಬರ್ ಕಳವು ಅಂತಹ ಚಟುವಟಿಕೆಗೆ ಅಪರಾಧ ಪ್ರಜೃತಿಯ ಜನ ಇಳಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.RFO ಎಸ್. ಎಸ್. ನಿಂಗಾನಿ ಮಾತನಾಡಿ ಅಜೈವಿಕ ಪ್ಲಾಸ್ಟಿಕ್ ವಸ್ತುಗಳ ಬಳಕೆ ಇಂದು ಜನತೆ ನಿಲ್ಲಿಸಬೇಕಿದೆ. ಪ್ಲಾಸ್ಟಿಕ್ ನಿಷೇಧದ ನಂತರವೂ ಇಂದು ಅಂಗಡಿಕಾರರು ಪ್ಲಾಸ್ಟಿಕನಲ್ಲೇ ದವಸ ಧಾನ್ಯ ನೀಡುತ್ತಿದ್ದು ಜನತೆ ಪ್ಲಾಸ್ಟಿಕ್ ಕಾಗದ, ಚೀಲಗಳ ಬಳಕೆ ಸ್ವಯಂಪ್ರೇರಿತ ಆಗಿ ನಿಲ್ಲಿಸಬೇಕು ಎಂದು ಕರೆ ನೀಡಿದರು.ಖಾನಾಪುರ ತಹಶೀಲ್ದಾರ ಡಿ. ಜಿ. ಹೆಗಡೆ ಮಾತನಾಡಿ ಕೃಷಿ ಮತ್ತು ಕೈಗಾರಿಕೆಗೆ ಹೆಚ್ಚೆಚ್ಚು ಗಿಡಮರ ಉರುಳಿಸಿದರೆ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನ ಹಾಳಾಗುತ್ತದೆ. ಖಾನಾಯ ವಲಯದ ಅರಣ್ಯ ತನ್ನ ದಟ್ಟತೆಯಲ್ಲಿ ಮನಮೋಹಕವಾಗಿದ್ದು, ಬೆಳಗಾವಿ ಜಿಲ್ಲೆಯ ಅಂದಕ್ಕೆ ಹೊಳಪು ನೀಡಿದೆ. ತಾಲೂಕು ಆಡಳಿತ ಅರಣ್ಯ ಇಲಾಖೆಯೊಂದಿಗೆ ಸತತ ಸಹಕಾರ ನೀಡುತ್ತದೆ ಎಂದರು.ಬಾರ್ ಅಸೋಸಿಯೇಶನ್, ಮರಾಠಾ ಮಂಡಳ ಸಂಸ್ಥೆ, ಆರ್ ಸಿಯು ವಿದ್ಯಾಸಂಗಮ ಬೆಳಗಾವಿ ಹಾಗೂ ಇತರ ಸಂಘಟನೆಗಳು ಭಾಗವಹಿಸಿದ್ದವು. ಖಾನಾಪುರ ಪಪಂ. ಅಧ್ಯಕ್ಷ ಅಜೀಮ್ ತೆಲಗಿ, ಪಪಂ. ಕಾರ್ಯನಿರ್ವಾಹಕ ಅಧಿಕಾರಿ ಮಠದ, ನ್ಯಾಯವಾದಿಗಳಾದ ಆರ್. ಎನ್. ಪಾಟೀಲ, ಈಶ್ವರ ಘಾಡೆ, ಮದನ ದೇಶಪಾಂಡೆ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.