SHARE

ಬೆಳಗಾವಿ: ಗೋ ಮಾಂಸ ಸಾಗಾಟ ಮಾಡುತ್ತಿದ್ದರೆಂದು ಹೇಳಲಾದ ವಾಹನಗಳನ್ನು ತಡರಾತ್ರಿ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಯುವಕರನ್ನೇ ಉದ್ಯಮಭಾಗ ಪೊಲೀಸರು ವಶಕ್ಕೆ ಪಡೆದರು ಎನ್ನಲಾದ ವಿಷಯಕ್ಕೆ ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಮಧ್ಯರಾತ್ರಿ ಖಂಡಿಸಿದರು.ಅಕ್ರಮ ಸಾಗಾಟ ಮಾಡುವವರನ್ನು ಹಿಡಿದುಕೊಟ್ಟವರನ್ನೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿ ವಿಚಾರಣೆಗೆ ತೆರಳಿದ ಇಬ್ಬರೂ ಶಾಸಕರನ್ನು ಪೊಲೀಸರು ಠಾಣೆ ಆವರಣದಲ್ಲಿ ಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷತನ ತೋರಿದರು ಎಂಬ ಗಂಭೀರ ಘಟನೆ ನಡೆದಿದೆ. ಈ ಸಂದರ್ಭ ಇಬ್ಬರೂ ಶಾಸಕರು ಠಾಣೆ ಆವರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿಗೆ ನಿರೀಕ್ಷಿಸುತ್ತ ಕಾಯ್ದು, ಕೊನೆಗೆ ಠಾಣೆ ಆವರಣದಿಂದ ಹೊರ ಬರುವಂತೆ ಆಯಿತು.

ಗೋವಾಕ್ಕೆ ಅಕ್ರಮ ಮಾಂಸ ಸಾಗಾಟ ಮಾಡುವ ವಾಹನಗಳನ್ನು ಕೆಲವು ಕಾರ್ಯಕರ್ತರು ತಡರಾತ್ರಿ 11ರ ಸುಮಾರಿಗೆ ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿದ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಪ್ರಕರಣದ ಮಾಹಿತಿ ಪಡೆಯಲು ಠಾಣೆಗೆ ತೆರಳಿದ ಶಾಸಕದ್ವಯರಿಗೆ ಹಿರಿಯ ಅಧಿಕಾರಿಗಳು ಒಳ ಕರೆಯದೇ ಮಜುಗುರ ಸನ್ನಿವೇಶ ಉಂಟು ಮಾಡಿದರು ಎಂಬ ಘಟನೆ ವಿಪರೀತಕ್ಕೆ ತಿರುಗುವ ಮುನ್ನವೇ ಸ್ವತಃ ಕಮಿಷ್ನರ್ ಡಾ. ರಾಜಪ್ಪ ಉದ್ಯಮಭಾಗ ಠಾಣೆಗೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಕೆಲ ಹಿರಿಯ ಅಧಿಕಾರಿಗಳು ಠಾಣೆಯ ಒಳಗಡೆ ಉಪಸ್ಥಿತರಿದ್ದರು. ಜತೆಗೆ ಶಾಸಕರು ಠಾಣೆಗೆ ಆಗಮಿಸಿರುವ ಮಾಹಿತಿ ಅವರಿಗಿರದೇ ಇರಲಿಲ್ಲ. ಆದರೆ ಒಳಕರೆದು ಮಾತನಾಡಿಸುವ ಸೌಜನ್ಯ ಮೆರೆಯಲಿಲ್ಲ. ಪೊಲೀಸರ ನಡೆಯ ಬಗ್ಗೆ ಕಮಿಷ್ನರ್ ಡಾ. ರಾಜಪ್ಪ ಆಗಮಿಸಿದ ಮೇಲೆ ಪರಿಸ್ಥಿತಿ ತಿಳಿ ಆಯಿತು ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದ್ದು, ಪೊಲೀಸ್ ತನಿಖೆ ನಡೆದಿದೆ.