SHARE

ವಿಶೇಷ ಬರಹ: ಅಶೋಕ್ ಚಂದರಗಿ

ದೊಡ್ಡ ಗೌಡರು ನಿನ್ನೆ ಬುಧವಾರ ದಿಲ್ಲಿ ತಲುಪಿದಾಗ ಹಾಕಿದ್ದ ಪೆಚ್ಚು ಮೋರೆ ಇಂದು ಗುರುವಾರ ಇದ್ದಕ್ಕಿದ್ದಂತೆ ಅಗಲವಾಗಿ ಮುಖಾರವಿಂದದಲ್ಲಿ ನಗೆತುಂಬಿಕೊಂಡಿದೆ! ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ ಸಭೆಗಾಗಿ ದಿಲ್ಲಿಗೆ ಬಂದಿರುವದಾಗಿ ನಿನ್ನೆ ಮುಖ ಕಿವುಚಿಕೊಂಡೇ ಹೇಳಿದ್ದ ಗೌಡರು ಇಂದು ಮುಂಜಾನೆ ಕರ್ನಾಟಕ ಭವನದಲ್ಲಿ ಪ್ರೆಸ್ ಮೀಟ್ ಕರೆಯುವರೆಂದು ಯಾರೂ ಭಾವಿಸಿರಲಿಲ್ಲ. ಆದರೆ ಕರೆದರು. ನಿನ್ನೆಯ ಮುಖ ಚಹರೆಗೂ ಇಂದಿನ ಮುಖಚಹರೆಗೂ ಸಾಕಷ್ಟು ಅಂತರವನ್ನು ಕಾಣಬಹುದಿತ್ತು.

ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬೇಕಾಗಿರುವ ಲೋಕಸಭೆ ಚುನಾವಣೆಗಳು ಇದೇ ವರ್ಷದ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆಯಿದ್ದು ಬಿಜೆಪಿ ವಿರುದ್ಧ ಮಹಾ ಮೈತ್ರಿಯೊಂದರ ರಚನೆಯ ಬಗ್ಗೆ ಸುದೀರ್ಘವಾಗಿ ಗೌಡರು ಮಾತನಾಡಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿ ತೃತೀಯ ರಂಗವೊಂದು ಅಸ್ತಿತ್ವಕ್ಕೆ ಬರುವ ಸಾಧ್ಯತೆಯನ್ನು ಕೆಲವರು ಪ್ರಸ್ತಾಪಿಸುತ್ತಿರುವದನ್ನೂ ಗೌಡರು ಒಪ್ಪಿಕೊಂಡರು.

ಈ ಎಲ್ಲ ಮಾತುಗಳ ಮಧ್ಯೆ ಪತ್ರಕರ್ತರು ಸಿದ್ದರಾಮಯ್ಯ ಅವರು ಸೃಷ್ಟಿಸುತ್ತಿರುವ ಗೊಂದಲಗಳು, ಬಜೆಟ್ ಮಂಡನೆಗೆ ಒಡ್ಡುತ್ತಿರುವ ಅಡಚಣಿಗಳ ಬಗ್ಗೆ ಕೇಳಿದರು. ಇದಕ್ಕೆ ಉತ್ತರಿಸಿದ ಗೌಡರು, ಸಣ್ಣ ಪುಟ್ಟ ವ್ಯತ್ಯಾಸಗಳು ಇರಬಹುದು, ಆ ಮಟ್ಟದಲ್ಲಿಯ ವಿಷಯಗಳನ್ನು ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಜೊತೆಗೊ, ವೇಣುಗೋಪಾಲ್ ಜೊತೆಗೆ ಮಾತನಾಡಿ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಸಿದ್ದು ನಿರ್ಮಿತ ಗೊಂದಲಗಳು ನಗಣ್ಯ ಎಂಬ ಸಂದೇಶವನ್ನು ರವಾನಿಸಲು ಯತ್ನಿಸಿದರು. ಇನ್ನು ನಾಲ್ಕೈದು ತಿಂಗಳಲ್ಲೇ ಲೋಕಸಭೆಗೆ ಚುನಾವಣೆಗಳು ನಡೆಯಲಿದ್ದು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಜೆಡಿಎಸ್ ಪಕ್ಷದ ಸಖ್ಯ ಅನಿವಾರ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದ ಗೌಡರು ತಮಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಟ್ಟುಕೊಡುವ ಸ್ಥಾನಗಳಲ್ಲಿ ಮಾಯಾವತಿಯವರ ಬಿಎಸ್ ಪಿ ಗೆ ಒಂದು ಸ್ಥಾನವನ್ನು ಕೊಡುವದಾಗಿಯೂ ಸೇರಿಸಿದರು.

ತಾವು ದಿಲ್ಲಿಯಲ್ಲಿ ಯಾವದೇ ಕಾಂಗ್ರೆಸ್ ನಾಯಕರನ್ನು ಭೆಟ್ಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರನ್ನು ಬಿಜೆಪಿ ಯ ಉದ್ಯಮಿ, ಮಾಜಿ ಎಮ್ ಎಲ್ ಸಿ ಲೆಹರ್ ಸಿಂಗ್ ಅವರು ಕರ್ನಾಟಕ ಭವನದಲ್ಲಿ ಭೆಟ್ಟಿಯಾಗಿ 20 ನಿಮಿಷಗಳ ಕಾಲ ಚರ್ಚಿಸಿದ್ದು ಈಗ ಹೊಸ ಬೆಳವಣಿಗೆ. ಸಿದ್ದು ಇಂದು ಸಂಪೂರ್ಣ ಸೈಲೆಂಟ್. ಮಾಧ್ಯಮದವರು ಎದುರಿಗೆ ಹೋದರೆ ಗರಂ ಆಗುತ್ತಿದ್ದಾರೆ. ಆದರೆ ಕುರುಬರ ಸಂಘದವರು ಸಿಎಮ್ ಗೆ ಎಚ್ಚರಿಕೆ ನೀಡಿದ್ದು, ತಮ್ಮ ಸಮಾಜದ ಅಧಿಕಾರಿಗಳನ್ನು ವರ್ಗಾಯಿಸಿ ಯಾವದೇ ಪೋಸ್ಟಿಂಗ್ ಕೊಟ್ಟಿಲ್ಲವೆಂದು ದೂರಿದ್ದಾರೆ. ಅತ್ತ ಒಕ್ಕಲಿಗರ ಸ್ವಾಮಿಗಳೂ ಸಹ ಕುಮಾರಸ್ವಾಮಿ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.

ಇಂದು ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಬರಲಿರುವ ಸಿದ್ದರಾಮಯ್ಯ ಅವರನ್ನು ಖರ್ಗೆಯವರು ಹೈಕಮಾಂಡ್ ಸಂದೇಶ ವಾಹಕರಾಗಿ ನಾಳೆ ಶುಕ್ರವಾರ ಭೆಟ್ಟಿಯಾಗಿ ಸೋನಿಯಾ ಸಂದೇಶವನ್ನು ಕಿವಿಯಲ್ಲಿ ಉಸುರಲಿದ್ದಾರೆ. ಅಲ್ಲಿಗೆ ಸಿದ್ದು ಗೊಂದಲಕ್ಕೆ ಅಂತಿಮ ತೆರೆ ಬೀಳಲಿದೆ. ಆಮೇಲೆ ಏನಿದ್ದರೂ,’ಪ್ರಾಕ್ಷಿ ವಾರ್ ” ಮಾತ್ರ!!

ಇತ್ತ ಬಿಜೆಪಿ ಯವರು ಮೀಟಿಂಗ್ ಮೇಲೊಂದು ಮೀಟಿಂಗ್ ಮಾಡಿಯೇ ಮಾಡುತ್ತಿದ್ದಾರೆ. ಅತೃಪ್ತ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಮತ್ತೆ ಹೇಳಿರುವ ಎಮ್ ಬಿ ಪಾಟೀಲರು ಜುಲೈ 15 ರ ಗಡುವು ನೀಡಿರುವದು “ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಷ್ಯ” ಎಂಬಂತಾಗಿದೆ. ಬ್ರಿಟನ್ ದ ರಾಜಕೀಯ ವಿಶ್ಲೇಷಕನೊಬ್ಬ ಹೇಳುತ್ತಾನೆ: ಎ ವೀಕ್ ಈಜ್ ಲಾಂಗೇಸ್ಟ್ ಪಿರೀಯಡ್ ಇನ್ ಪಾಲಿಟಿಕ್ಸ( ರಾಜಕೀಯದಲ್ಲಿ ಒಂದು ವಾರವೆಂದರೆ ಅತ್ಯಂತ ದೀರ್ಘಾವಧಿ ಸಮಯ). ಇನ್ನು ಜುಲೈ 15 ರ ಗಡುವು ನೀಡಿದರೆ ಕೇಳಬೇಕೆ? ಅಷ್ಟರಲ್ಲಿ ನಡೆಯಬಹುದಾದ ಸಂಪುಟ ವಿಸ್ತರಣೆಯಲ್ಲಿ ಪಾಟೀಲರು ಪ್ರಮಾಣ ವಚನ ಸ್ವೀಕರಿಸುವದು ಬಹುತೇಕ ಖಚಿತ.

ಕುಮಾರಸ್ವಾಮಿಯವರು ನಿಶ್ಚಿಂತೆಯಿಂದ ಬಜೆಟ್ ತಯಾರಿಯಲ್ಲಿ ತೊಡಗಿದ್ದು ಉಳಿದೆಲ್ಲ “ಬಾಹ್ಯ ದಾಳಿಗಳನ್ನು’ ಅವರ ಡೆಪ್ಯುಟಿ ಪರಂ ಮತ್ತು ಡಿಕೆ ನೋಡಿಕೊಳ್ಳಿತ್ತಿದ್ದಾರೆ. ಇಂದು ಗುರುವಾರ ಮುಂಜಾನೆ 9 ರಿಂದ 10 ಗಂಟೆಯವರೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಸಚಿವರು, ಶಾಸಕರಿಗೆ ಹೈ ಕಮಾಂಡ್ ನೀಡಿದ “ಅಂಟಿ ಸಿದ್ದು” ಮೆಸೇಜ್ ರವಾನೆಯಾಗಿದ್ದು ಸಿದ್ದು ಬೆಂಬಲಿಗರು ನಾಳೆಯಿಂದ ಸಿದ್ದು ಇದ್ದ ಕಡೆ ಹಾಯುತ್ತಾರೊ, ಅವರಿಂದ ತಪ್ಪಿಸಿಕೊಂಡು ಓಡಾಡುತ್ತಾರೊ ಕಾದು ನೋಡಬೇಕು.