SHARE

ಬೆಂಗಳೂರು: ಈ ಬಜೆಟ್ ನಲ್ಲಿ ಏನೂ ಇಲ್ಲ ಅಂತ ಅಂದುಕೊಳ್ಳುವುದು ಬೇಡ, ಬೇರೆ ರೀತಿಯಲ್ಲಿ ಮಾತನಾಡುವುದು ಬೇಡ ಎಂದು ಬಜೆಟ್‌ ಕುರಿತ ಹಲವರ ಗೊಂದಲಗಳಿಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಬಜೆಟ್‌ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಜೆಟ್‌ ಕುರಿತು ಹಲವರಲ್ಲಿ ಒಂದೊಂದು ರೀತಿಯ ವ್ಯಾಖ್ಯಾನಗಳಿವೆ. ಹಲವರಲ್ಲಿ ತಪ್ಪುಗ್ರಹಿಕೆಗಳಿವೆ ಯಾರೂ ತಪ್ಪು ಗ್ರಹಿಕೆಗೆ ಒಳಗಾಗಬೇಕಿಲ್ಲ ಎಂದು ತಿಳಿಸಿದರು.

ಬೆಂಗಳೂರಿಗೆ ಈ ಬಜೆಟ್ ನಲ್ಲಿ ಏನೂ ಇಲ್ಲ ಎಂದು ಹೇಳಿದ ಬಿಜೆಪಿಯ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಯೋಜೆನೆ ಕೈಗೊಳ್ಳಲಾಗಿದೆ. ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್.ಪುರಂ-ಗೊರಗುಂಟೆ ಪಾಳ್ಯ, ರಿಚ್ಮಂಡ್ ಸರ್ಕಲ್,ಸೇರಿ ಒಳ ಭಾಗಗಳು, ಮಿನರ್ವ ಸರ್ಕಲ್ ನಿಂದ ನೈಸ್ ರೋಡ್ ಜಂಕ್ಷನ್ ಇಲ್ಲಿ ಎಲಿವೆಟೇಡ್ ಕಾರಿಡಾರ್ ಗೆ ಒಪ್ಪಿಗೆ ಕೊಟ್ಟಿದ್ದೇವೆ. ಇದನ್ನ ಅಶೋಕ ಚಕ್ರವರ್ಥಿ ತಿಳಿದುಕೊಳ್ಳಬೇಕು ಎಂದರು.

ಕರಾವಳಿ, ಮಲೆನಾಡು , ಹೈದ್ರಾಬಾದ್‌ ಕರ್ನಾಟಕ ಎಲ್ಲಾ ಇಲಾಖೆಗಳು ಸೇರಿದಂತೆ ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಎಲ್ಲಾ ಯೋಜನೆಗಳನ್ನು ಮುಂದುವರಿಸಿದ್ದೇನೆ ಗೊಂದಲ ಬೇಡ. ಯಾರೂ ಅನ್ಯತಾ ಭಾವಿಸಬೇಕಿಲ್ಲ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು‌ ಹೇಳಿದರು.

ಬಜೆಟ್ ಓದುವಾಗ ಬಿಜೆಪಿ ನಾಯಕರು ಎಲ್ಲಿ ನೋಡ್ತಿದ್ರೋ, ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ೧೦ ಕೋಟಿ ಇಟ್ಟಿದ್ದೇವೆ, ಅದನ್ನ ಬಜೆಟ್ ನಲ್ಲಿ ತಿಳಿಸಿಲ್ಲ ಅಷ್ಟೇ, ಹಾಸನಕ್ಕೆ ಹೆಚ್ಚಿನ ಕೊಡುಗೆ ಅಂತ ಆರೋಪಿಸ್ತಾರೆ. ಹಾಸನದಲ್ಲಿ ಜೆಡಿಎಸ್ ಶಾಸಕರಲ್ಲ, ಬಿಜೆಪಿ ಶಾಸಕರಿರೋದು ಅವರು ಬೇಡ ಅಂದರೆ ವಾಪಸ್ ಪಡೆದುಕೊಳ್ತೇನೆ ಎಂದು ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು ನೀಡಿದರು.

ನಾವು ಆರೇಳು ಸಾವಿರ ಕೋಟಿ ಹಣ ಒದಗಿಸಬೇಕಿದೆ. ಈ ಹಣವನ್ನ ನಾವು, ಪರಮೇಶ್ವರ್ ಹೊಂದಿಸೊಕೆ ಆಗುತ್ತಾ. ಕೇಂದ್ರ ಸರ್ಕಾರ ಏನು ಹೆಚ್ಚಿನ ನೆರವು ಕೊಡುತ್ತಾ.? ಎಂದು ಪ್ರಶ್ನಿಸಿದ ಅವರು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿಲ್ಲ. ದಕ್ಷಿಣ ಭಾರತದಲ್ಲಿ ಅತಿ ಕಡಿಮೆ ದರ ನಮ್ಮದು. ಚಪ್ಪಾಳೆಯನ್ನ ಕೇಂದ್ರದಿಂದ ಹೊಡೆಸಬೇಕು ಬಿಜೆಪಿ ನಾಯಕರು ಎಂದು ಹೇಳಿದರು.

ಕೇಂದ್ರದಿಂದ ಪೆಟ್ರೋಲ್ ದರ 9 ಭಾರಿ ಏರಿಕೆಯಾಗಿದೆ. ಬಿಜೆಪಿ ನಾಯಕರು ಕೇಂದ್ರದಲ್ಲಿ ಟೇಬಲ್ ಕುಟ್ಟಿ ಕೇಳಲಿ. ಶೆಟ್ಟರ್ ಕಾಲದಲ್ಲಿ ಸಾಲಮನ್ನಾ ಮಾಡಿದ್ರು, ಅದರ ಹಣ ಪಾವತಿ ಮಾಡಿದ್ದು ೮೦೦ ಕೋಟಿ ಮಾತ್ರ, ಉಳಿದ ಹಣವನ್ನು ತೀರಿಸಿದ್ದು ಸಿದ್ದರಾಮಯ್ಯ, ಏನು ಶೆಟ್ಟರ್ ಅವರು ಹಣವನ್ನ ಹುಬ್ಬಳ್ಳಿಯಿಂದ ತರ್ತಾರಾ..? ಎಂದು ಜಗದೀಶ್ ಶೆಟ್ಟರ್ ವಿರುದ್ಧ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ನಾವು ಯಾವ ಜಿಲ್ಲೆಯನ್ನೂ ಮರೆತಿಲ್ಲ. ಕಲಬುರಗಿ, ಕೊಪ್ಪಳ, ಬೆಳಗಾವಿ ಕರಾವಳಿ ಎಲ್ಲಕ್ಕೂ ಆಧ್ಯತೆ ನೀಡಿದ್ದೇವೆ.ಇದೊಂದು ಸರ್ಪೈಸ್ ಬಜೆಟ್ ಸೋಮವಾರದಿಂದ ಬಜೆಟ್ ಬಗ್ಗೆ ಚರ್ಚೆ ನಡೆಯಲಿ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.

ಕೇಂದ್ರದಿಂದ ಒಂದು ನಯಾಪೈಸೆ ಕೊಡಿಸಲಿಲ್ಲ ಬಿಜೆಪಿಯವರು, ದೆಹಲಿಗೆ ಹೋಗಿದ್ದಾಗ ನಾನು ಮನವಿ ಮಾಡಿದ್ದೆ. ಪ್ರಧಾನಿ ಬಳಿ ನೆರವು ಕೇಳಿದ್ದೆ. ಒಂದು ಬಿಡಿಗಾಸು ಕೊಡೋಕೆ ಆಗಲಿಲ್ಲ ನಿಮ್ಮಿಂದ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಕುಮಾರಸ್ವಾಮಿ ಗುಡುಗಿದರು.

ಬೆಂಕಿ‌ ಹಚ್ಚುವವರನ್ನ ನಂಬ ಬೇಡಿ ಎಂದು ಕರಾವಳಿ ಭಾಗದ ಜನರಿಗೂ ಹೇಳುತ್ತೇನೆ. ಉತ್ತರಕರ್ನಾಟಕಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ. ಬೇರೆ ಯಾವ ಕಾರ್ಯಕ್ರಮ ಬೇಕು ಹೇಳಿ ಎಲ್ಲವನ್ನೂ ಕೊಡುತ್ತೇವೆ. ಯಾವ ಸೆಕ್ಟರ್ ನಾವು ಕೈಬಿಟ್ಡಿದ್ದೇವೆ ಹೇಳಿ ನೊಡೋಣ ಎಂದು ಪ್ರಶ್ನಿಸಿದರು.

ಕಲಬುರಗಿಯಲ್ಲಿ ಸೋಲಾರ್ ಪ್ಲಾಂಟ್ ಹಾಕುತ್ತಿದ್ದೇವೆ. ಇದನ್ನ ಮಾಡ್ತಿರೋದು ಯುವಕರಿಗೆ ಉದ್ಯೋಗ ಕೊಡೋಕೆ. ಬಳ್ಳಾರಿ, ಕೊಪ್ಪಳಕ್ಕೂ ಯೋಜನೆ ಕೊಟ್ಟಿದ್ದೇವೆ. ಸ್ವಲ್ಪ ಹೃದಯ ವೈಶಾಲ್ಯತೆ ತೋರಿಸಿ, ಕಲ್ಮಶ ಮನಸ್ಸು ಇಟ್ಟುಕೊಂಡರೆ ಎಲ್ಲವೂ ಅಸತ್ಯವೇ ಕಾಣುತ್ತೆ ಎಂದು ಪದೇ ಪದೇ ಬಿಜೆಪಿ ನಾಯಕರಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.