SHARE

ಬೆಳಗಾವಿ: ಮಳೆಯಿಲ್ಲದೇ ಪರಿತಪಿಸುತ್ತಿರುವ ಬಾಗಲಕೋಟ ಜಿಲ್ಲೆಯ ಬದಾಮಿ ಭಾಗದ ರೈತರಿಗೆ ಕುಡಿಯುವ ನೀರು ಮಲಪ್ರಭಾ ನದಿಯಿಂದ ಹರಿಸುವಂತೆ ಒತ್ತಾಯಿಸಿ ಬದಾಮಿ ತಾಲೂಕಿನ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಬಿತ್ತಿದ ಬೆಳೆಗಳು ಒಣಗುತ್ತಿವೆ ಕೂಡಲೇ ನೀರು ಬಿಟ್ಟರೆ ಅನುಕೂಲ ಎಂದು ಬಾಗಲಕೋಟ ಜಿಲ್ಲೆಯ ಬಾಚಿನಗುಡ್ಡ, ಜಾಲಿಹಾಳ, ನಂದಿಕೇಶ್ವರ, ಗೋನಾಳ, ಶಿರಬಡಗಿ, ಮಂಗಳೂರ್ ಗ್ರಾಮಗಳ ರೈತರು ಇಂದು ಆಗಮಿಸಿ ಡಿಸಿ & ಆರ್ ಸಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಿದರು.
ನುಣುಚಿಕೊಂಡ ARC: ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗಂಗೂಬಾಯಿ ಮಾನಕರ ಅವರನ್ನು ಭೇಟಿಯಾದ ರೈತರಿಗೆ ನಿರೀಕ್ಷಿತ ಉತ್ತರ ಸಿಗದೇ ನಿರಾಸೆಯಾಯಿತು. ನೀರು ಬಿಡಬೇಕಾದ್ರೆ ಜಿಲ್ಲಾಧಿಕಾರಿ ಕಡೆಗೆ ಹೋಗ್ರಿ, ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ನೀರು ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ, ನೀವು ಬಾಯಿ ಮಾತಿನಿಂದ ಏನು ಹೇಳಿದರೂ ನಡೆಯೊಲ್ಲ ಎಂಬ ಹಾರಿಕೆ ಉತ್ತರ ಪ್ರಾದೇಶಿಕ ಆಯುಕ್ತೆ ನೀಡಿದರು.

ಪಕ್ಕದ ಜಿಲ್ಲೆಯ ಊರುಗಳಿಂದ ನಾವೆಲ್ಲ ಗ್ರಾಮಸ್ಥರು ಬೆಳಗಾವಿಗೆ ಬಂದಿದ್ದು ಸೂಕ್ತ ಉಪಾಯ ನೀಡಬೇಕು ಎಂಬ ರೈತರ ಮಾತಿಗೆ ARC ಸೊಪ್ಪು ಹಾಕಲಿಲ್ಲ. ಅಶೋಕ ಚನಗೌಡ, ಕನಕಪ್ಪ ಪೂಜಾರ, ಹನಮಂತ ಪಟ್ಟದಕಲ್, ಎಂ. ಬಿ. ರೋಣದ, ಎಂ. ಆರ್. ಚನಗೌಡ್ರ, ರಂಗಪ್ಪ ಸಂಗಿನಮಠ, ರುದ್ರಗೌಡ ರೋಣದ ಇತರರು ಉಪಸ್ಥಿತರಿದ್ದರು.