SHARE

ಬೆಳಗಾವಿ: ಆರೋಗ್ಯಕ್ಕೆ ಚೇತೋಹಾರಿ ‘ಸೈಕ್ಲಿಂಗ್’ಗೆ ಬೆಳಗಾವಿ ಅರಣ್ಯಾಧಿಕಾರಿಗಳು ಮಾರು ಹೋಗಿದ್ದಾರೆ. ಸ್ವಿಮ್ಮಿಂಗ್ ನಂತರ ಪೂರ್ಣ ದೇಹಕ್ಕೆ ವ್ಯಾಯಾಮ ನೀಡುವ ಸೈಕಲ್ ತುಳಿತ ಮತ್ತು ಪರಿಸರ ಸ್ನೇಹಿ ಸಿಟಿ(City) ಸಾರಿಗೆಯತ್ತ ನಾಗರಿಕರನ್ನು ಸೆಳೆಯಲು ಅರಣ್ಯಾಧಿಕಾರಿಗಳ ಸೈಕ್ಲಿಂಗ್ ಹವ್ಯಾಸ ಗಮನ ಸೆಳೆದಿದೆ.ಪ್ರತಿನಿತ್ಯ ಸೈಕಲ್ ತುಳಿಯುವ ಹವ್ಯಾಸ ಬೆಳೆಸಿಕೊಂಡಿರುವ RFO ಸಂಗಮೇಶ ಪ್ರಭಾಕರ & ಅವರ ಸಹುದ್ಯೋಗಿ ಗೆಳೆಯರು ಪಾಲಿಕೆಯ PBS ಯೋಚನೆ ಸ್ವಾಗತಿಸಿದ್ದಾರೆ. ಪಾರಿಸರಿಕ ವಾಯುಮಾಲಿನ್ಯ ತಡೆಗಟ್ಟಲು, ಸಂಚಾರ ದಟ್ಟನೆ ತಗ್ಗಿಸಲು, ಅಪಘಾತಗಳ ಇಳಿಕೆ, ಜನರ ಆರೋಗ್ಯ ವೃದ್ಧಿ, ಬೊಜ್ಜುತನ ಕರಗಿಸಲು ಉತ್ತಮ ವಾಹಕ ಸೈಕಲ್ ಎನ್ನುತ್ತಾರೆ ಸಂಗಮೇಶ ಪ್ರಭಾಕರ. ವಯಸ್ಸಿನಿಂದ ಹಿರಿಯರಾದರೂ IFS ಅಧಿಕಾರಿ ಬೆಳಗಾವಿ DCF ಎಂ. ವಿ. ಅಮರನಾಥ ತರುಣ ಅಧಿಕಾರಿಗಳಿಗಿಂತ ಕಡಿಮೆ ಏನಿಲ್ಲ ಬಿಡಿ. ಕಳೆದ ಒಂದು ದಶಕದಿಂದಲೂ ಸೈಕಲ್ ಸ್ನೇಹ ಅಮರನಾಥ ಅವರು ಬಿಟ್ಟಿಲ್ಲ. ಕಚೇರಿ ಅವಧಿ ಹೊರತಾದ ಬಿಡುವಿನ ಸಮಯದಲ್ಲಿ ಸೈಕಲ್ ಸವಾರಿ ಮಾಡುವುದು ಅವರ ಹವ್ಯಾಸ.RFOಗಳಾದ ನಾಗರಾಜ ಬಾಳೆಹೊಸೂರ, ಬಸವರಾಜ ವಾಳದ, ಶ್ರೀನಾಥ ಕಡೋಲಕರ & ಸಂಗಮೇಶ ಪ್ರಭಾಕರ ತಮ್ಮ ಅಧೀನ ಇಚ್ಚಿತ ಸಿಬ್ಬಂಧಿಗಳು ಮತ್ತು ಗೆಳೆಯರೊಂದಿಗೆ ಸೈಕಲ್ ಸವಾರಿ ಅಭ್ಯಾಸ ರೂಢಿಸಿಕೊಂಡು ಗಮನ ಸೆಳೆದಿದ್ದಾರೆ. ಕೊರಕಲು ಅರಣ್ಯ ಪ್ರದೇಶದಲ್ಲಿ ಸೈಕಲ್ ಬಳಕೆ ಕರ್ತವ್ಯ ನಿರ್ವಹಿಸಲು ಬಹಳ ಅನುಕೂಲಕಾರಿ ಎನ್ನುತ್ತಾರೆ ಅರಣ್ಯಾಧಿಕಾರಿಗಳು.ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ Public Bicycle Share ಸಿಸ್ಟಮ್ ನಗರದಲ್ಲಿ ಜಾರಿ ತರುವುದನ್ನು ಉತ್ಸಾಹಿ ಸೈಕ್ಲಿಂಗ್ ಅರಣ್ಯಾಧಿಕಾರಿಗಳ ತಂಡ ಸ್ವಾಗತಿಸಿದೆ. ಜನಒತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ‘ಸೈಕಲ್ ಶೇರ್’ ವ್ಯವಸ್ಥೆ ಮಾಡುವುದರಿಂದ ನಗರದಲ್ಲಿ ಹೊಸಕ್ರಾಂತಿ ಮಾಡಿದಂತಾಗುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.ಚಿಕ್ಕಂದಿನ ಸೈಕಲ್ ತುಳಿಯುವ ಅಭ್ಯಾಸ ಇಂದಿನವರೆಗೂ ಮುಂದುವರೆದಿದೆ. ಕರ್ತವ್ಯ ನಿರತ ವೇಳೆ ಸರಕಾರಿ ಜೀಪ್ ಮತ್ತು ದೂರದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಬಳಕೆ ಮಾಡುತ್ತೇನೆ. ಉಳಿದಂತೆ ನಗರ ವ್ಯಾಪ್ತಿಯಲ್ಲಿ ಹತ್ತಾರು ಕಿಮೀ. ಪ್ರಯಾಣಕ್ಕೆ ನನಗೆ ಸೈಕಲ್ ಅಚ್ಚು ಮೆಚ್ಚಾಗಿದೆ ಎನ್ನುತ್ತಾರೆ ಸಂಗಮೇಶ ಪ್ರಭಾಕರ. ನೂತನ ಹೊಸ ಕೇಂದ್ರ ಬಸ್ ನಿಲ್ದಾಣ, ಚನ್ನಮ್ಮ ವೃತ್ತ, ಕಾಕತಿವೇಸ್, ಕಿರ್ಲೋಸ್ಕರ್ ರಸ್ತೆ ಬಳಿ, ಕ್ಯಾಂಪ್ ಪ್ರದೇಶ, ಟಿಳಕವಾಡಿ ಪ್ರದೇಶ, ಶಹಾಪುರ- ಖಾಸಭಾಗ ಪ್ರದೇಶ, ನೆಹರೂ ನಗರ & ಅಜಂ ನಗರ ಪ್ರದೇಶಗಳಲ್ಲಿ ಸೈಕಲ್ ಶೇರ್ ಕೇಂದ್ರಗಳ ಸ್ಥಾಪನೆ ಮಾಡುವುದು ಅವಶ್ಯಕ ಎಂದಿದ್ದಾರೆ. ಬೆಳಗಾವಿ ವಿಟಿಯೂ ಆವರಣದ(Campus) ವಿದ್ಯಾರ್ಥಿಗಳಿಗೆ ಸೈಕಲ್ ಬಳಕೆಗೆ ಉತ್ತೇಜಿಸಲಾಗಿದೆ. ಅದರಂತೆ ಇತರ ಖಾಸಗಿ & ಸರಕಾರಿ ವಿಶ್ವವಿದ್ಯಾಲಯಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬರಬೇಕೆನ್ನುವುದು ನಾಗರಿಕರ ಆಶಯ.

IPS ಅಧಿಕಾರಿ ಎಡಿಜಿಪಿ ಭಾಸ್ಕರರಾವ್ ಸಹ ಸೈಕಲ್ ಸವಾರಿಯ ಅದ್ಭುತ ಪ್ರಯೋಜನಗಳ ಬಗ್ಗೆ ಸ್ವತಃ ಸಾವಿರಾರು ಕಿಮೀ. ಸೈಕಲ್ ಓಡಿಸಿ ರಾಜ್ಯದ ಗಮನ ಆಗಲೇ ಸೆಳೆದಿರುವುದು ಗಮನಾರ್ಹ. ಬೆಳಗಾವಿ IGP ಆಗಿದ್ದ ವೇಳೆ ಭಾಸ್ಕರರಾವ್ ನೂರಾರು ಕಿಮೀ. ಸೈಕಲ್ ತುಳಿಯುತ್ತಿದ್ದರು. ಅದರಂತೆ ಈಗ KSRPಯಲ್ಲಿ ಸೈಕಲ್ ಸಾಹಸ ಕ್ರೀಡೆಗೂ ಉತ್ತೇಜನ ನೀಡಿದ್ದಾರೆ. ಸೈಕಲ್ ಪ್ರಯಾಣದಿಂದ ಸ್ವ- ಆರೋಗ್ಯ ವೃದ್ಧಿ & ಪಾರಿಸರಿಕ ಕ್ಷಮತೆ ಕಾಯುವ ಮಹತ್ವದ ಜತೆಗೆ ಸಾರುವುದೇ ಸೈಕಲ್ ಸವಾರಿಯ ಪ್ರಮುಖ ಉದ್ದೇಶ.
ಬೆಳಗಾವಿ ನಗರದಲ್ಲಿ ಕೆಲವೇ ವರ್ಷಗಳಲ್ಲಿ ದುಪ್ಪಟ್ಟು ವಾಹನಗಳು ರಸ್ತೆಗಿಳಿದು ಸಂಕಷ್ಟ ಸೃಷ್ಟಿಸಿರುವ ನಡುವೆ ಸ್ಮಾರ್ಟ್ ಸಿಟಿ ಅಡಿ ಸೈಕಲ್ ಶೇರಿಂಗ್ ಪ್ರಸ್ತಾವಕ್ಕೆ ವ್ಯಾಪಕ ಜನಮನ್ನನೆ ದೊರೆಯುತ್ತಿರುವುದು ಸಂತಸದ ವಿಚಾರ.