SHARE

ಬೆಳಗಾವಿ: ಮೂರು ದಶಕಗಳ ಮೇಲ್ಪಟ್ಟು ದೇಶದಲ್ಲಿ ತಳವೂರಿದ್ದ ಆಂಗ್ಲರನ್ನು ಅಹಿಂಸೆ & ಉಪವಾಸ ಅಸ್ತ್ರಗಳ ಮೂಲಕ ಹೊರಹಾಕಿರುವುದು ಭಾರತದ ಸಾತ್ವಿಕ ಶಕ್ತಿಯ ಸಂಕೇತ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. 72ನೇ ಸ್ವಾತಂತ್ರ್ಯೋತ್ಸವದ ಜಿಲ್ಲಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಹೋರಾಟದ ಹಿಂದೆ ದೊಡ್ಡ ಇತಿಹಾಸ & ಪರಂಪರೆಯೇ ಇದೆ. ಕರ್ನಾಟಕ ರಾಜ್ಯದ ವೀರಮಹಿಣಿಯರು ದೇಶದ ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ಹಾಗೂ ತಳಪಾಯ ನೀಡಿದ್ದಾರೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ಸಿಂಧೂರ ಲಕ್ಷ್ಮಣ, ಸುರಪುರ ವೆಂಕಟಪ್ಪ ನಾಯಕ, ಆಲೂರು ವೆಂಕಟರಾವ್, ಒನಕೆ ಓಬವ್ವ, ಎನ್. ಎಸ್. ಹರ್ಡಿಕರ ಮತ್ತಿತರರು. ರಾಟಿ ಮೇಟಿಗಳೇ ಭಾರತದ ಶಕ್ತಿ. ಇವುಗಳ ಮೇಲೆ ಭಾರತದ ಉಜ್ವಲ ಭವಿಷ್ಯ ಅಂದು ಮಹಾತ್ಮಾ ಗಾಂಧೀಜಿ ಕಂಡಿದ್ದರು. ಗಾಂಧೀಜಿ ಕನಸು ನ‌ನಸು ಮಾಡಿದ್ದು ಬೆಳಗಾವಿ ಜಿಲ್ಲೆಯ ಹುದಲಿ ಎಂದರು.

ಸ್ವಾತಂತ್ರ್ಯ ಎನ್ನುವುದು ಅನುಪಮ, ಅಮೂಲ್ಯ ಜೀವನರತ್ನ. ಅದರ ಆಶಯಗಳು ಸಂವಿಧಾನ ಪುಸ್ತಕದಲ್ಲಿ ಅಡಕವಾಗಿವೆ. ನಮ್ಮ ದೇಶದ ಯುವ ಜನಾಂಗ ರಾಷ್ಟ್ರದ ಪ್ರೇಮ, ಪರಿಶ್ರಮ, ಸಂಯಮ, ಪ್ರಾಮಾಣಿಕತೆ ಹೆಚ್ಚು ಮಾಡಿಕೊಳ್ಳಬೇಕು. ರಾಷ್ಟ್ರೀಯ ಐಕ್ಯತೆ, ಸಮಗ್ರತೆ & ಮತೀಯ ಸೌಹಾರ್ಧತೆ ಕಾಯಬೇಕು ಎಂದು ರಮೇಶ ಜಾರಕಹೊಳಿ ಕರೆ ನೀಡಿದರು.ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನಾಗರಿಕ ಪೊಲೀಸ್, ಕೆಎಸ್ ಆರ್ಪಿ, ಡಿಎಆರ್, ಟ್ರಾಫಿಕ್ ಪೊಲೀಸ್, ಮಹೇಶ್ವರಿ ಅಂಧ ಶಾಲಾ ಮಕ್ಕಳು ಹಾಗೂ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ನಡೆಯಿತು.

ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ, ಐಜಿಪಿ ಅಲೋಕಕುಮಾರ, ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ, ಸಿಇಓ ಆರ್. ರಾಮಚಂದ್ರನ್, ಡಿಸಿಪಿ ಸೀಮಾ ಲಾಟಕರ, ಎಸ್ಪಿ ಸಿ. ಎಚ್. ಸುಧೀರಕುಮಾರ ರೆಡ್ಡಿ ಇತರರು ಉಪಸ್ಥಿತರಿದ್ದರು.