SHARE

ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ ಅವರ ನಿರ್ಧಾರಗಳು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳಲ್ಲಿ ಗೊಂದಲ ಸೃಷ್ಟಿ ಮಾಡಿದೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಬ್ರದರ್ಸ ಅವರ ಸ್ವ ಸ್ವತ್ತಲ್ಲ. ಸರಕಾರ ಬೀಳಿಸುವುದೇ ಆದರೆ ನಿಮ್ಮ ಬೆಂಬಲಿಗ ಶಾಸಕರ ಜೊತೆ ಪಕ್ಣದಿಂದ ಹೊರಹೋಗಬಹುದು ಎಂದು ಬ್ರದರ್ಸ್ ಗೆ ಎಚ್ಚರಿಸಿದ್ದಾರೆ.

ರಾಜ್ಯ ನಾಯಕ ಡಿ. ಕೆ. ಶಿವಕುಮಾರ ಅವರನ್ನು ಜಿಲ್ಲೆಯಲ್ಲಿ ಭಾಗವಹಿಸದಂತೆ ತಡೆಯಲು ಜಾರಕಿಹೊಳಿ ಬ್ರದರ್ಸ್ ಯಾರು ಎಂದು ಪ್ರಶ್ನಿಸಿದರು. ಪಕ್ಷದ ವರಿಷ್ಠರಾದ ಸೊನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ವರಿಷ್ಠ ನಾಯಕರ ಭಾವಚಿತ್ರ ಹಾಗೂ ಪಕ್ಷದ ಹಸ್ತದ ಗುರುತು ನಮೂದು ಇಲ್ಲದ ಜಾಹೀರಾತುಗಳು ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್ ಹಾಕುತ್ತಾರೆ ಎಂದು ಆರೋಪಿಸಿದರು.

ನನ್ನ ಹತ್ಯೆಗೆ ಜಾರಕಿಹೊಳಿ ಕುಟುಂಬ ಯೋಜಿಸಿದ್ದು, ಸಚಿವ ರಮೇಶ ಜಾರಕಿಹೊಳಿ ಗನಮ್ಯಾನ ಅವರನ್ನು ಹಿಂಪಡೆಯಲು ಪೊಲೀಸರಿಗೆ ತಿಳಿಸಿದ್ದು ತಿಳಿದುಬಂದಿದೆ ಎಂದರು. ಪಕ್ಷವನ್ನು ವ್ಯವಸ್ಥಿತವಾಗಿ ಕಟ್ಟಿದ ಲಕ್ಷ್ಮೀ ಹೆಬ್ಬಾಳಕರ ಜಿಲ್ಲೆಯ ಕಿತ್ತೂರು ಚನ್ನಮ್ಮ ಎಂದು ಬಣ್ಣಿಸಿದರು. ಲಕ್ಷ್ಮೀ ಹೆಬ್ಬಾಳಕರ ಹೋರಾಟದ ಮೂಲಕ ಶಾಸಕಿಯಾಗಿದ್ದು ಅವರ ರಾಜಕೀಯ ಏಳ್ಗೆಗೆ ತೊಂದರೆ ಕೊಡುವುದು ತರವಲ್ಲ ಎಂದರು. ಇನ್ನೊಬ್ಬ ರಾಜ್ಯ ನಾಯಕ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಭಾಗವಹಿಸಬಾರದು ಎಂದರೆ ಹೇಗೆ.

ತುಮಕೂರು ಮೂಲದ ಎಂ. ಡಿ. ಲಕ್ಷ್ಮೀನಾರಾಯಣ ಅವರನ್ನು ಬೆಳಗಾವಿಗೆ ಕರೆತಂದು ಚುನಾವಣೆಗೆ ನಿಲ್ಲಿಸಿದ್ದು ಯಾಕೆ ಎಂದು ಸಚಿವ ರಮೇಶ ಜಾರಕಿಹೊಳಿ ಅವರನ್ನು ಪ್ರಶ್ನಿಸಿದರು. ಸರಕಾರ ಕೆಡವುವ ಹೆದರಿಕೆ ಹಾಕಿ, ಬ್ಲ್ಯಾಕಮೇಲ್ ಮಾಡುತ್ತಿರುವ ಜಾರಕಿಹೊಳಿ ಅವರನ್ನು ಕೆಪಿಸಿಸಿ ಕೂಡಲೇ ನೊಟೀಸ್ ಕೊಟ್ಟು ಹಠಾತ್ ಪಕ್ಷದಿಂದ ಹೊರಹಾಕಬೇಕು ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಯ್ದು, ಕಟ್ಟಲು ಕೆಪಿಸಿಸಿ ಮುಂದಾಗಬೇಕು. ಪಕ್ಷ ಅಧೋಗತಿಗೆ ಇಳಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಚಿವ ಡಿ. ಕೆ. ಶಿವಕುಮಾರ ಬೆಳಗಾವಿ ಜಿಲ್ಲೆಯಲ್ಲಿ ಧೈರ್ಯವಾಗಿ ಬರಬೇಕು. ಅವರು ಜಿಲ್ಲೆಯಲ್ಲಿ ಪಕ್ಷಕ್ಕೆ ಚೈತನ್ಯ ತುಂಬಿ ಗೌರವ ಹೆಚ್ಚಿಸಬೇಕು ಎಂದರು. ಜಾರಕಿಹೊಳಿ ಬ್ರದರ್ಸ್ ಹಿಂದೆ ಪಕ್ಷ ಬಿಟ್ಟು ಹೋಗುವ ಆ 14 ಜನ ಶಾಸಕರು ಯಾರು ಎಂಬುವುದನ್ನು ಪಕ್ಷವೇ ಪತ್ತೆ ಹಚ್ಚಿ ನೊಟೀಸ್ ಕೊಟ್ಟು ಅಂಥವರನ್ನು ಹೊರಹಾಕಬೇಕು ಎಂದರು.