SHARE

ಬೆಳಗಾವಿ: ಥೇಟ್ ರೈತರ ಸ್ಟೈಲನಲ್ಲಿ ಹಸಿರು ಟವೆಲ್ ಹೊತ್ತ ಸರಕಾರದ ಪವರ್ ಮಿನಿಸ್ಟರ್ ಡಿಕೆಶಿ ಇಂದು ಕಣಕುಂಬಿ ಯೋಜನಾ ಪ್ರದೇಶದಲ್ಲಿ ಓಡಾಡಿ ಪರಿಶೀಲನೆ ನಡೆಸಿದರು. ರಾಜ್ಯದ ಬಿಸಿಲು ಜಿಲ್ಲೆಗಳ ಬಹುದಿನಗಳ ಬೇಡಿಕೆಯ ನೀರ ಹಂಚಿಕೆ ಮಹಾ ತೀರ್ಪಿನ ನಂತರ ರಾಜ್ಯ ಜಲ ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಇಂದು ಭೇಟಿ ನೀಡಿ ಮುಂದೆ ರಾಜ್ಯ ಇಡಬೇಕಾದ ಹೆಜ್ಜೆಗಳ ಕುರಿತು ಅಧಿಕಾರಿ & ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.ಮಹಾದಾಯಿ ನ್ಯಾಯಾಧೀಕರಣ ನೀಡಿದ ತೀರ್ಪಿನ ನಂತರ ತನ್ನ ಪಾಲಿನ ನೀರಿನ ಬಳಕೆಗೆ ಈಗ ರಾಜ್ಯ ಸರಕಾರ ಅಗತ್ಯ ಯೋಜನೆಗಳನ್ನು ಜಾರಿ ತರುವುದು ಬಾಕಿ ಇದೆ. ಇದಕ್ಕೆ ಕೇಂದ್ರ ಪರಿಸರ ಇಲಾಖೆ, ಸರ್ವೋಚ್ಚ ನ್ಯಾಯಾಲಯದ ಅನುಮತಿ ನಂತರ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಡಿಕೆಶಿ ನುಡಿದಿದ್ದಾರೆ. ಮಹದಾಯಿ ತೀರ್ಪು ಸಂತೋಷಕ್ಕಿಂತ ದುಖಃ ಉಂಟು ಮಾಡಿದೆ. ಸಿಕ್ಕಷ್ಟು ನೀರಿನ ಸದ್ಭಳಕೆಗೆ ರಾಜ್ಯ ಸರಕಾರ ತಕ್ಷಣದ ಕ್ರಮಗಳನ್ನು ವಹಿಸುತ್ತಿದೆ. ಸರಕಾರ ಹೆಚ್ಚುವರಿ ಹಣ ಹೂಡಿಕೆ ಮಾಡಿ ಯೋಜನೆ ಜಾರಿಗೊಳಿಸುತ್ತದೆ ಎಂದರು. ಮಹದಾಯಿ ಕಾಮಗಾರಿಗಾಗಿ ಬೇಕಾಗುವ ಹೆಚ್ಚುವರಿ ಜಮೀನು ಪಡೆಯುವ ಕೆಲಸ ಪ್ರಾರಂಭಿಸಲಾಗುವುದು. ಪರಿಸರ ಮತ್ತು ಜೀವವೈವಿಧ್ಯಕ್ಕೆ ಹಾನಿಯಾಗದಂತೆ ಕೆಲಸ ಮಾಡಲಾಗುತ್ತದೆ ಎಂದರು.

ಮಹಾದಾಯಿ ಬೊಗಸೆ ಸಿಹಿನೀರು ಕುಡಿಯುವ ಮೂಲಕ ನೀರು ಆಹ್ವಾನಿಸಿ ಸಚಿವ ಡಿಕೆಶಿ ಗಮನ ಸೆಳೆದರು. ಶಾಸಕಿಯರಾದ ಡಾ. ಅಂಜಲಿ ನಿಂಬಾಳಕರ, ಲಕ್ಷ್ಮೀ ಹೆಬ್ಬಾಳಕರ, ಜೆಡಿಎಸ್ ನಾಯಕ ಎಂ. ಎಚ್. ಕೋನರೆಡ್ಡಿ, ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದರು.