SHARE

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಪಡಿಸಿ ಯುವತಿ ಸಾವಿಗೆ ಕಾರಣನಾದ ಗೋವಾದ ಮಾಪಸಾ ಶಾಸಕನ ಪುತ್ರನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮಾಪಸಾ ಶಾಸಕ ಫ್ರಾನ್ಸಿಸ್ ಡಿಸೋಜಾ ಅವರ ಪುತ್ರ ಕಲಂಗುಟ ನಿವಾಸಿ ಕೈಲ್ ಟಿಕ್ಲೋ ಅವರನ್ನು ಮಾರ್ಕೇಟ್ ಉಪವಿಭಾಗ ಪೊಲೀಸರು ವಶಕ್ಕೆ ಪಡೆದರು.

ಸೋಮವಾರ ಸಂಜೆ ಫ್ರುಟ್ ಮಾರ್ಕೇಟ್ ಪ್ರದೇಶದಿಂದ- ಉಜ್ವಲಾ ನಗರದತ್ತ ನಾಲ್ವರು ಯುವತಿಯರು ಹೆದ್ದಾರಿ ದಾಟುತ್ತಿದ್ದ ವೇಳೆ ವೇಗದ BMW ಹಿಟ್ ಪ್ರಕರಣದಲ್ಲಿ ಬೆಳಗಾವಿಯ ಯುವತಿ ತೆಹನಿಯತ್ ಬಿಸ್ತಿ (೧೮) ಮೃತಪಟ್ಟು, ಇನ್ನೊಬ್ಬಳು ಸಮ್ರೀನ್ ಬಿಸ್ತಿ(೨೦) ಗಾಯಗೊಂಡಿದ್ದಳು. ಇದಾದ ನಂತರ ಉದ್ರಿಕ್ತ ಜನತೆ ಕಾರಿಗೆ ಬೆಂಕಿ ಹಚ್ಚಿ, ಶಾಸಕನ ಪುತ್ರ, ಕಾರು ಚಾಲಕ ಕೈಲ್ ಟಿಕ್ಲೋನನ್ನು ಮನಬಂದಂತೆ ಥಳಿಸಿದ್ದರು. ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಟಿಕ್ಲೋನನ್ನು ವಶಕ್ಕೆ ಪಡೆದರು.

ಮೃತ ತೆಹನಿಯತಳ ಹಿರಿಯ ಸಹೋದರಿ ತಸ್ಮಿಯಾ ಅಪಘಾತದ ಬಗ್ಗೆ ಸಂಚಾರಿಪೊಲೀಸರಿಗೆ ದೂರು ನೀಡಿದ್ದಾಳೆ. ಜತೆಗೆ ತನ್ನ ಮೇಲೆ ಸಾರ್ವಜನಿಕ ಹಲ್ಲೆ ನಡೆದ ಬಗ್ಗೆ ಟಿಕ್ಲೋ ದುಷ್ಕರ್ಮಿಗಳ ವಿರುದ್ದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾನೆ.