SHARE

ಬೆಳಗಾವಿ: ಅಪರಿಮಿತ ಹರ್ಷೋಧ್ಘಾರದ ನಡುವೆ ಬೆಳಗಾವಿ ರಾಜ್ಯೋತ್ಸವ ಬೆಳಗಾವಿ ನಗರದಲ್ಲಿ ಹಿಂದೆಂದಿನ ವರ್ಷಗಳಿಗಿಂತ ಸಂಭ್ರಮದಿಂದ ನಡೆಯಿತು. ಲಕ್ಷಾಂತರ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿ ನಾಡ ಉತ್ಸವಕ್ಕೆ ಅಪಾರ ಮೆರಗು ತುಂಬಿದರು.ಇದೇ ಮೊದಲ ಬಾರಿ ರಾಜ್ಯೋತ್ಸವ ಮೆರವಣಿಗೆ ಮೇಲೆ ಹೆಲಿಕಾಫ್ಟರ್ ಮೂಲಕ ಜಿಲ್ಲಾಡಳಿತದಿಂದ ಪುಷ್ಪವೃಷ್ಠಿ ಮಾಡಲಾಯಿತು. ಚೆನ್ನಮ್ಮ ವೃತ್ತದಲ್ಲಿ ಸೇರಿದ್ದ ಕನ್ನಡಾಭಿಮಾನಿಗಳು ಕನ್ನಡಾಭಿಮಾನ ಮೆರೆಯುವ ಸಂಗೀತಕ್ಕೆ ಬಿಡುವಿಲ್ಲದೇ ಹೆಜ್ಜೆ ಹಾಕಿದರು. ಜೂನಿಯರ್ ಡಾ. ರಾಜಕುಮಾರ, ಜೂನಿಯರ್ ಶಿವರಾಜಕುಮಾರ ಯುವ ವೇದಿಕೆ ಕಲ್ಲಿನ ರಥ ವೇದಿಕೆಯಲ್ಲಿ ನೆರೆದಿದ್ದ ಲಕ್ಷಾಂತರ ಜನರನ್ನು ತಮ್ಮ ಹಾವಭಾವ ಸಂಗೀತದ ಮೂಲಕ ರಂಜಿಸಿದರು. ಕರವೇ ವತಿಯಿಂದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರರು ಸಾನಿಧ್ಯ ವಹಿಸಿದರು.ಹೋಳಿಗೆ ಊಟ:ಹುಕ್ಕೇರಿ ಶ್ರೀ ಹಿರೇಮಠದಿಂದ ರಾಜ್ಯೋತ್ಸವಕ್ಕೆ ಆಗಮಿಸಿದ ಜನತೆಗೆ ಸರ್ದಾರ್ ಮೈದಾನದಲ್ಲಿ ಹೋಳಿಗೆ ಊಟ ಬಡಿಸಲಾಯಿತು. ಬೆಳಿಗ್ಗೆಯಿಂದ ಸಂಜೆವರೆಗೆ ಸಾವಿರಾರು ಜನ ಪ್ರಸಾದ ಸ್ವೀಕರಿಸಿದರು.ರಾಜ್ಯೋತ್ಸವಕ್ಜೆ ಚಾಲನೆ:ನಗರದ ಸಿಪಿಎಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ರಾಜ್ಯೋತ್ಸವ ಧ್ವಜಾರೋಹಣ ನಡೆಸಿ ಸಾಂದರ್ಭಿಕ ಶುಭಾಶಯ ಆಶು ಭಾಷಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಸಿಪಿಎಡ್ ಮೈದಾನದಲ್ಲಿ ರೂಪಕ ವಾಹನಗಳಿಗೆ ಚಾಲನೆ ನೀಡಿದರು.ಫಲಪುಷ್ಪ ಪ್ರದರ್ಶನ: ರಾಜ್ಯೋತ್ಸವದ ಅಂಗವಾಗಿ ತೋಟಗಾರಿಕರ ಇಲ್ಲಿನ ಹ್ಯೂಮ್ ಪಾರ್ಕನಲ್ಲಿ ಆಕರ್ಷಕ ಫಲ ಹಾಗೂ ಪುಷ್ಪ ಪ್ರದರ್ಶನ ಏರ್ಪಡಿಸಿತು. ಸಾವಿರಾರು ಜನ ಪ್ರದರ್ಶನ ವೀಕ್ಷಿಸಿದರು.ಭುವನೇಶ್ವರಿಗೆ ಪೂಜೆ, ಹೋಮ-ಹವನ: ರಾಜ್ಯೋತ್ಸವ ನಿಮಿತ್ತ ಬೆಳಂಬೆಳಿಗ್ಗೆ ಚನ್ನಮ್ಮ ವೃತ್ತದ ಕರ್ನಾಟಕ ಯುವ ವೇದಿಕೆಯಲ್ಲಿ ತಾಯಿ ಭುವನೇಶ್ವರಿಗೆ ಪೂಜೆ, ರುದ್ರ ಹೋಮ-ಹವನ, ಅಭಿಷೇಕ ಮಾಡಲಾಯಿತು.
ಕಯುವೇ ಸಂಘಟನೆಯ ಅಧ್ಯಕ್ಷ ಅನಂತಕುಮಾರ ಬ್ಯಾಕೂಡ ಹಾಗೂ ಕಾರ್ಯಕರ್ತರು ಪೂಜೆ ನೆರವೇರಿಸಿ ರಾಜ್ಯದ ಗಮನ ಸೆಳೆದರು.ಝಾಪಾಗಳಿಗೆ ಏಟು:ನಗರದಲ್ಲಿ ರಾಜ್ಯೋತ್ಸವದ ಮೆರವಣಿಗೆ ನಡೆದಿದ್ದರೆ ನಗರ ದಕ್ಷಿಣ ಭಾಗದಲ್ಲಿ ಕರಾಳದಿನಾಚರಣೆಗೆ ತೊಡಗಿದ್ದ ಎಂಇಎಸ್, ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದರಿಂದ ಪೊಲೀಸರಿಂದ ಹೋಳಿಗೆ ಸವಿಯಿತು.ಭಾರಿ ಜನಸ್ತೋಮ:ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕನ್ನಡಾಭಿಮಾನಿಗಳುಗಳು ದ್ವಿಗುಣಗೊಂಡರು. ಚನ್ನಮ್ಮ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಜನಜಂಗುಳಿ ನಿಯಂತ್ರಿಸಲು ಹರಸಾಹಸ ಪಟ್ಟರು. ‘…ಯಾರಪ್ಪಂದೇನೈತಿ…ಬೆಳಗಾವಿ ನಮ್ಮದೈತಿ’ ಎಂಬ ಅಭಿಮಾನಪೂರ್ವಕ ಹಾಡಿ ಹೆಚ್ಚಿನ ಸಂಘಟನೆಗಳ ರೂಪಕಗಳ ಸುತ್ತ ರಣರಣಿಸುತ್ತಿತ್ತು.‌ಅಧಿಕಾರಿಗಳ ಹುಮ್ಮಸ್ಸು:ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ, ಡಿಸಿ ಎಸ್. ಬಿ. ಬೊಮ್ಮನಹಳ್ಳಿ, ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ, ಸಿಇಓ ಆರ್. ರಾಮಚಂದ್ರನ್, ಎಸ್ಪಿ ಸುಧೀರಕುಮಾರ ರೆಡ್ಡಿ, ಎಡಿಸಿ ಡಾ. ಬೂದೆಪ್ಪ ಮತ್ತು ಕಮಿಷ್ನರ್ ಶಶಿಧರ ಕುರೇರ ಚನ್ನಮ್ಮ ವೃತ್ತದ ವೇದಿಕೆಯಲ್ಲಿ ಕುಳಿತು ರಾಜ್ಯೋತ್ಸವ ಸಂಭ್ರಮ ಪರಿವೀಕ್ಷಿಸಿದರು. ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆ ಚನ್ನಮ್ಮ ವೃತ್ತ ಹೊಂದಿಕೊಂಡಿರುವ ಸಂಗೊಳ್ಳಿ ರಾಯಣ್ಣ ರಸ್ತೆ, ಕಾಲೇಜು ರಸ್ತೆ, ಕಾಕತಿವೆಸ್ ರಸ್ತೆಗಳು ಜನಸಾಗರದಿಂದ ತುಂಬಿಹೋದವು.ಮೊದಲಿಗರು: ಕನ್ನಡಿಗ ಮೇಯರ್ ಬಸವರಾವ ಚಿಕ್ಕಲದಿನ್ನಿ, ಕನ್ನಡ ಹೋರಾಟಗಾರ ಅನಂತಕುಮಾರ ಬ್ಯಾಕೂಡ್ ಚನ್ನಮ್ಮನ ಮೇಲೆ ಲೋಹದ ಹಕ್ಕಿಯಲ್ಲಿ ಕುಳಿತು ಹಾರಾಡಿ ಪುಷ್ಪವೃಷ್ಠಿ ಮಾಡಿದ ಮೊದಲುಗರಾದರು.ಮುನವಳ್ಳಿ ಮುನ್ನುಡಿ:ಹೆಲಿಕಾಫ್ಟರ್ ಹಾರಾಟ ರದ್ದು ಮಾಡಿದ್ದ ಜಿಲ್ಲಾಡಳಿತ ಕನ್ನಡ ಸಂಘಟನೆಗಳ ಎಡೆಬಿಡದ ಒತ್ತಾಸೆ ಮತ್ತು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಅವರ ಸಮಯೋಚಿತ ಆರ್ಥಿಕ ಸಹಾಯ ಮಾಡಲು ಸ್ವತಃ ಮುಂದೆ ಬರುತ್ತಿದ್ದಂತೆ ಮೊಜಿಗಕ್ಕೆ ಒಳಗಾಗಿ, ಅಂತೂ ಕೊನೆಗೆ ತನ್ನದೇ ಖರ್ಚಿನಲ್ಲಿ ಹೆಲಿಕಾಫ್ಟರ್ ಹಾರಿಸಿ ಜನರಾಶಿಯ ಪ್ರೀತಿಗೆ ಜಿಲ್ಲಾಡಳಿತ ಭಾಜನವಾಯಿತು. ಬೆಳಗಾವಿ ಕನ್ನಡಿಗರು ತುಸು ತುರುಸಿನಿಂದಲೇ ಹಿಂದೆಂದಿನಿಗಿಂತ ಹೆಚ್ವು ಸಂಖ್ಯೆಯಲ್ಲಿ ಸೇರಿ ಹಿಂದಿಲ್ಲದ ವಿನೂತನ ಸಂಭ್ರಮ ವ್ಯಕ್ತಪಡಿಸಿದರು. ಪೊಲೀಸರಿಂದ ಲಾಠಿ ಏಟು ತಿಂದು ನಾಮಮಾತ್ರ ‘ಖ್ಯಾತೆ’ ತೋರಿಸಿ ಝಾಪಾ ಎಂಇಎಸ್ ತೆಪ್ಪಗಾಯಿತು. ಕನ್ನಡಿಗರ ಅಚಲ ಸಂಭ್ರಮ ಬೆಳಿಗ್ಗೆಯಿಂದ ತಡರಾತ್ರಿವರೆಗೆ ಮುಂದುವರೆಯಿತು.