SHARE

ಬಳ್ಳಾರಿ: ಬಳ್ಳಾರಿಯ ಉಪಚುನಾವಣೆಯ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಜನಾದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿ ಸೋಲಿನ ನಂತರ ಮಾತನಾಡಿದ ಅವರು, ಪಕ್ಷ ನನ್ನ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿತ್ತು. ಸೋಲು ಅನಾಥ. ವಿಶ್ವಾಸ ಎಲ್ಲರದ್ದು. ಹಾಗಾಗಿ ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ. ಅದರ ಸಂಪೂರ್ಣ ಹೊಣೆ ನನ್ನದೇ’ ಎಂದು ಸ್ಪಷ್ಟಪಡಿಸಿದರು.

ಸೋಲಿಗೆ ಕಾರಣ ಏನು ಏಂಬುದಕ್ಕೆ ಕಾರ್ಯಕರ್ತರ ಜತೆ ಚರ್ಚಿಸಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಈ ಸೋಲಿನಿಂದ ರಾಮುಲು ಅಥವಾ ಬಳ್ಳಾರಿ ಅಭ್ಯರ್ಥಿ ಜೆ. ಶಾಂತ ಬಗ್ಗೆ ಕೆಲ ಕಾರ್ಯಕರ್ತರಲ್ಲಿ ಋಣಾತ್ಮಕ ಭಾವನೆ ಬಂದಿರಬಹುದು. ಇವರ ಮಧ್ಯೆ ಅನೇಕ ಕಾರ್ಯಕರ್ತರು ನಿಷ್ಠೆಯಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಆದರೆ ಪಕ್ಷದಲ್ಲಿ ಯಾವುದೇ ಲೋಪದೋಷವಿಲ್ಲ ಎಂದು ತಿಳಿಸಿದ್ದಾರೆ.

ಸಿಕ್ಕಾಪಟ್ಟೆ ಹಣ ಹಂಚಿ ವಿ.ಎಸ್​. ಉಗ್ರಪ್ಪ ಗೆದಿದ್ದಾರೆ ಎಂದು ಆರೋಪಿಸಿದ ಶ್ರೀರಾಮುಲು, ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಹಾಗಾಗಿ ಬಳ್ಳಾರಿಯಲ್ಲಿ ಹೆಚ್ಚಿನ ಹಣ ಹಂಚಿಕೆ ಮಾಡಿದ್ದಾರೆ. ಇದರಿಂದ ಅವರಿಗೆ ಗೆಲುವು ಸಾಧ್ಯವಾಗಿದೆ. ನಾನು ಹಣ ಹಂಚಿಲ್ಲ. ಹಾಗಾಗಿ ಸೋತಿರಬಹುದು. ಆದರೆ. ಇದು ಕೇವಲ ಉಪಚುನಾವಣೆ, ಇದು ಲೋಕಸಭೆ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.