SHARE

ಬೆಂಗಳೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆ ಬಿಜೆಪಿಯವರಿಗೆ ಇಷ್ಟವಿಲ್ಲ ಅಂದರೆ. ನೀವು ಮನೆಯಲ್ಲಿರ್ರಿ ನಿಮಗ್ಯಾರು ಬಾ ಅಂತಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ನಾನು ಎಂದೂ ವಿರೋಧಿಸಿಲ್ಲ ಎಂದು ತಿಳಿಸಿದರು. ನಾವು ಟಿಪ್ಪು ಜಯಂತಿಯನ್ನು ಈಗಷ್ಟೇ ಆಚರಿಸುತ್ತಿಲ್ಲ. ನಾನು ಟಿಪ್ಪು ಜಯಂತಿಯನ್ನು ದೋಸ್ತಿ ಸರ್ಕಾರ ರಚನೆ ಆದ್ಮೇಲೆ ಆಚರಿಸುತ್ತಿಲ್ಲ. ನಾವು ಮೊದಲಿನಿಂದಲೂ ಜೆಡಿಎಸ್ ಕಚೇರಿಯಲ್ಲಿ ಆಚರಿಸುತ್ತಿದ್ದೇವೆ ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡೋದನ್ನ ನಿಲ್ಲಿಸಿ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ದೇಶದಲ್ಲಿ ಹಲವಾರು ಧರ್ಮಗಳಿವೆ. ಅವರವರ ಧರ್ಮಗಳ ನಾಯಕರ ಜಯಂತಿ ಮಾಡಿಕೊಳ್ಳಲು ಬಿಜೆಪಿಗೆ ವಿರೋಧವೇಕೆ..? ಎಂದು ಪ್ರಶ್ನಿಸಿದರು. ಟಿಪ್ಪು ಜಯಂತಿ ದಿನ ಶಾಂತಿ ಕದಡೋ ಯತ್ನ ಮಾಡಬಾರದು, ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡಿದರೆ ಸರಿಯಲ್ಲ. ಅವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.