SHARE

ಬೆಳಗಾವಿ: ಡಿಸಿ ಹಠಾವೊ… ಕಿಸಾನ್ ಬಚಾವೋ ಘೋಷಣೆ ಇಂದು ಬೆಳಂಬೆಳಿಗ್ಗೆ ರಣರಣಿಸಿತು. ನಿನ್ನೆ ಹಗಲಿನಿಂದ ಮುಂದುವರೆದು ರಾತ್ರಿಯಿಡಿ ಧರಣಿ ನಡೆಸಿದ ರೈತರು ಬೆಳಿಗ್ಗೆ ಅರೆಬೆತ್ತಲೆಯಾಗಿ ಮಾರ್ಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕೈಗೊಂಬೆ ಆಗಿರುವ ಡಿಸಿ ಎಸ್. ಬಿ. ಬೊಮ್ಮನಹಳ್ಳಿ ಅವರನ್ನು ಕೂಡಲೇ ಸರಕಾರ ವರ್ಗಾವಣೆ ಮಾಡಬೇಕು. ಕಬ್ಬಿಗೆ ಬಾಕಿ ಬಿಲ್ ಇಲ್ಲ. ಎಫ್ ಆರ್ ಪಿ ದರವೂ ಕೊಡುತ್ತಿಲ್ಲ. ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ರಾಜಕಾರಣಿಗಳ ಕೈಗೊಂಬೆಯಾಗಿದ್ದು ಆಡಳಿತ ಹದಗೆಟ್ಟು ಹೋಗಿದೆ ಎಂದು ಘೋಷಣೆ ಕೂಗಿದರು.

ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಡಿಸಿ ಎಸ್. ಬಿ. ಬೊಮ್ಮನಹಳ್ಳಿ ಅವರ ಭಾವಚಿತ್ರ ಪ್ರದರ್ಶಿಸಿ ರೈತರು ಅರೆಬೆತ್ತಲೆ ಪ್ರತಿಭಟನೆ ಎರಡನೇ ದಿನಕ್ಕೂ ಮುಂದುವರೆಸಿದರು. ಮಧ್ಯರಾತ್ರಿ ಟ್ರ್ಯಾಕ್ಟರ್ ಪ್ರೊಟೆಸ್ಟ್, ಇಳಿರಾತ್ರಿ ಚನ್ನಮ್ಮ ವೃತ್ತದಲ್ಲಿ ಲಾರಿಗಳ ತಡೆದು ಪ್ರತಿಭಟನೆ, ತಲೆ ಮೇಲೆ ಕಲ್ಲು ಹೊತ್ತು ಕುಳಿತು ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿಯೇ ಉತ್ತಮ ಆಡಳಿತ ನಡೆಸಲು ಅಸಮರ್ಥರಾಗಿದ್ದಾರೆ. ಸಕ್ಕರೆ ಲಾಬಿಯೊಂದಿಗೆ ಜಿಲ್ಲಾಧಿಕಾರಿ ಕೈ ಜೋಡಿಸಿದ್ದಾರೆ ಎಂದು ನೇರವಾಗಿ ಆರೋಪಿಸಿದರು.