SHARE

ಬೆಳಗಾವಿ: ಅಂಧತ್ವ ಶಾಪವಲ್ಲ, ಅದು ದೈವತ್ವ ಎಂದು ಡಿಸಿಪಿ ಸೀಮಾ ಲಾಟಕರ ಮಕ್ಕಳಿಗೆ ಧೈರ್ಯ ನೀಡಿದರು. ನಗರದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮುಗಳಖೋಡ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ ಗುರುವಂದನೆ ಹಾಗೂ ಅನ್ನಸಂತರ್ಪನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅಂಧತ್ವದ ನಡುವೆಯೂ ಸೂಕ್ಷ್ಮ ಸಂವೇಧನಾಶೀಲತೆ ಮಕ್ಕಳಲ್ಲಿ ಕಂಡುಬರುತ್ತದೆ. ದೃಷ್ಠಿ ಹೊಂದಿದವರಿಗಿಂತಲೂ, ಅಂಧವಿಕಲಚೇತನರು ಹೆಚ್ಚು ಚಟುವಟಿಕೆಯಿಂದ ಇದ್ದಾರೆ. ಬಡವರು, ಅಂಧರು, ವಿಕಲಚೇತನರು ಹಾಗೂ ಅಸಹಾಯಕ ಜನರ ಸಹಾಯಕ್ಕೆ ಇಡೀ ಸಮಾಜ ಒಗ್ಗೂಡಿ ನಿಲ್ಲಬೇಕಿದೆ ಎಂದರು.ದಾನೇಶ್ವರಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ದೇಸಾಯಿ ಮಾತನಾಡಿ ಅಂಧ ಮಕ್ಕಳು, ವಿಕಲಚೇತನರು ಹಾಗೂ ಅನಾಥ ಮಕ್ಕಳೊಂದಿಗೆ ಸಮಾಜ ಬಂಧುತ್ವ ಸಾಧಿಸಬೇಕು. ತಮ್ಮ ಮಕ್ಕಳ ಹುಟ್ಟುಹಬ್ಬ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಇಂತಹ ಮಕ್ಕಳೊಂದಿಗೆ ಆಚರಿಸಿ ಅವರೊಂದಿಗೆ ಆಹಾರ ಹಂಚಿ ತಿನ್ನುವ ರೂಢಿ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ನ್ಯಾಯವಾದಿ ಆರ್. ಪಿ. ಪಾಟೀಲ ಮಾತನಾಡಿ ಮುಗಳಖೋಡ ಶ್ರೀಮಠದ ಪವಾಡಗಳು ಅಪಾರ. ದೇಶದಲ್ಲೇ ಮುಗಳಖೋಡ ಶ್ರೀಮಠ ಜಾತ್ಯಾತೀತ ಬೃಹತ್ ಮಠವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಪವಾಡಗಳ ಮೂಲಕ ಜನರ ಕಷ್ಟನಷ್ಟ ಪರಿಹರಿಸಿದ ಖ್ಯಾತಿ ಮುಗಳಖೋಡ ಮಠಕ್ಕೆ ಸಲ್ಲುತ್ತದೆ. ಕನ್ನಡಿಗರಿಗೆ ಸಂಕಷ್ಟ ಬಂದಾಗ ಶ್ರೀಮಠ ಬೆನ್ನೆಲುಬಾಗಿ ನಿಂತಿದೆ. ಪ್ರಾಕೃತಿಕ ವಿಕೋಪಗಳ ಸಂದರ್ಭ ಸಹಾಯ ಹಾಗೂ ಬೃಹತ್ ಕಲ್ಯಾಣ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮಠ ಮುಂದೆ ಇದೆ ಎಂದರು.ಕಣ್ಣುದಾನ:ಇದೇ ಸಂದರ್ಭ ಶ್ರೀ ದಾನೇಶ್ವರಿ ಸೇವಾ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ದೇಸಾಯಿ ಅವರು ಮುಗಳಖೋಡ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಹೆಸರಿನಲ್ಲಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಘೋಷಣೆ ಮಾಡಿದರು. ತಮ್ಮ ಕೊನೆ ದಿನಗಳ ನಂತರ ಮಾಹೇಶ್ವರಿ ಅಂಧ ಮಕ್ಕಳ ಶಾಲೆಗೆ ಕಣ್ಣು ದಾನ ಮಾಡುವುದಾಗಿ ಘೋಷಿಸಿದರು.

ಅನ್ನಸಂತರ್ಪನೆ: ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಗುರುವಂದನೆ ನಿಮಿತ್ತ ಮಕ್ಕಳಿಗೆ ಡಿಸಿಪಿ ಸೀಮಾ ಲಾಟಕರ ಸಿಹಿ ವಿತರಿಸಿ, ಅನ್ನಸಂತರ್ಪನೆ ನೆರವೇರಿಸಿದರು. ಕರ್ನಾಟಕ ಯುವ ವೇದಿಕೆ, ಡಿವೈನ್ ಚಾರಿಟೇಬಲ್ ಟ್ರಸ್ಟ್- ಮುಗಳಖೋಡ, ಐಸಿರಿ ಚಾರಿಟೇಬಲ್ ಟ್ರಸ್ಟ್ -ಬೆಳಗಾವಿ ಕಾರ್ಯಕ್ರಮ ಆಯೋಜಿಸಿದ್ದವು. ಕಯುವೇ ರಾಜ್ಯಾಧ್ಯಕ್ಷ ಅನಂತಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ವರಿ ಅಂಧಮಕ್ಕಳ ಶಾಲೆಯ ಕಾರ್ಯದರ್ಶಿ ಪ್ರಭಾಕರ ಎಸ್. ನಾಗರಮುನ್ನೊಳ್ಳಿ, ಮಾನವ ಹಕ್ಕುಗಳ ಸಂಸ್ಥೆಯ ಅಧ್ಯಕ್ಷ ಸುಧೀರ ಕೆ. ಸಂಭಾಜಿ, ವೇದಮೂರ್ತಿ ರಾಚಯ್ಯ ಶಾಸ್ತ್ರೀ, ಉದ್ಯಮಿ ಜಾಕೀರ್ ತಾಳಿಕೋಟಿ, ನ್ಯಾಯವಾದಿ ನಿಂಗನಗೌಡ ಪಾಟೀಲ, ನಿವೃತ್ತ ತಹಶೀಲ್ದಾರ ಎಸ್. ಎಸ್. ಪಾಟೀಲ, ರಾಜೇಂದ್ರ ದೇಸಾಯಿ, ಪತ್ರಕರ್ತ ಮಂಜುನಾಥ ಪಾಟೀಲ, ಇತರರು ಉಪಸ್ಥಿತರಿದ್ದರು.