SHARE

ಜಿ. ಪುರುಷೋತ್ತಮ

ಬೆಳಗಾವಿ(ವಿಧಾನ ಪರಿಷತ್): ಚಿಂತಕರ ಚಾವಡಿ ಮೇಲ್ಮನೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಇತ್ಯರ್ಥಕ್ಕೆ ಸೂಕ್ತ ಚರ್ಚೆಯೇ ಆಗುತ್ತಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಸದನದ ಬಾವಿಗಳಿಗೆ ಇಳಿದು ಪ್ರತಿಭಟನೆ ನಡೆಸಿತು. ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸದಸ್ಯರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಬುಧವಾರ ಸಂಜೆ ಕೋಟಾ ಶ್ರೀನಿವಾಸ ನೇತೃತವದಲ್ಲಿ ವಾಕ್ ಔಟ್ ಮಾಡಿದ್ದ ಪ್ರತಿಪಕ್ಷ ಬಿಜೆಪಿ ಸರಕಾರದ ಆಡಳಿತ ಮತ್ತು ಸದನದಲ್ಲಿ ಚರ್ಚೆಗೆ ಪ್ರತಿ ಸಾರ್ಥಕ ಉತ್ತರ ನೀಡುವಲ್ಲಿ ವಿಫಲವಾಗಿದೆ ಎಂಬುವುದು ‘ಪ್ರಜಾಪ್ರಭುತ್ವದ ಕಾವಲುನಾಯಿಯ’ ಆತಂಕಕ್ಕೆ ಕಾರಣವಾಯಿತು.

ಸಿಎಂ ಎಚ್. ಡಿ. ಕುಮಾರಸ್ವಾಮಿ ಪ್ರಶ್ನೋತ್ತರಕ್ಕೆ ಅನುವು ಮಾಡಿಕೊಡಿ ಉತ್ತರ ಕರ್ನಾಟಕದ ಸಮಸ್ಯೆಗಳ ಇತ್ಯರ್ಥಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಪ್ರತಿಪಕ್ಷದ ಬಳಿ ನಿವೇದಿಸಿಕೊಳ್ಳಲು ವಿಫಲ ಯತ್ನ ನಡೆಸಿದರು. ಸಭಾಧ್ಯಕ್ಷ ಪ್ರತಾಪಚಂದ್ರಶೆಟ್ಟಿ ಬೆಳಿಗ್ಗೆ ಒಮ್ಮೆ ಹಾಗೂ ತದನಂತರ ಮತ್ತೊಮ್ಮೆ ಸದನವನ್ನು ಮುಂದೂಡಿದರು. ಪರಿಷತ್ ಮತ್ತು ವಿಧಾನಸಭೆ ಎರಡೂ ಕಡೆ ಸರಕಾರದ ನೀತಿ ನಿರ್ಧಾರ, ಆಡಳಿತ ವೈಖರಿ ಹಾಗೂ ಸದನದ ಚರ್ಚೆಗೆ ಪ್ರತಿಯಾಗಿ ಉತ್ತರಿಸುವಲ್ಲಿ ಸಮಾಧಾನಕರ ಅಂಶಗಳು ಕಾಣದ್ದನ್ನು ಮುಂದು ಮಾಡಿಕೊಂಡು ಬಿಜೆಪಿ ಪ್ರತಿಭಟನೆ ಹಾದಿ ಹಿಡಿಯಿತು. ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ, ಸಮ್ಮಿಶ್ರ ಸರಕಾರ ಹಾಗೂ ದೋಸ್ತಿ ಪಕ್ಷಗಳಲ್ಲಿನ ಸಂಪುಟ ವಿಸ್ತರಣೆ ಗೊಂದಲ ಹಾಗೂ ಒತ್ತಡಗೊಳಗಾಗಿ ಮುಕ್ತಾಯಕ್ಕೆ ಎರಡು ದಿನ ಮುಂಚೆಯೇ ಅಧಿವೇಶನ ಹರೋಹರ ಎಂಬಂತಾಯಿತು. ಗುರುವಾರ ಮಧ್ಯಾಹ್ನ ಸುಸೂತ್ರವಾಗಿ ಎರಡೂ ಮನೆಗಳಲ್ಲಿ ಸದನ ನಡೆದು ಶುಕ್ರವಾರ ಶುಭ ಸಂಪನ್ನವಾಗುವ ಲಕ್ಷಣಗಳು ಇಂದು ಮಧ್ಯಾಹ್ನದವರೆಗೆ ಕಾಣಿಸಲಿಲ್ಲ.