SHARE

ಜಿ. ಪುರುಷೋತ್ತಮ

ಬೆಳಗಾವಿ(ಸುವರ್ಣಸೌಧ): ಬಹುನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆ ಶನಿವಾರದ ಬದಲು ಮುಂದೂಡುವ ಕಗ್ಗಂಟು ಉಂಟಾಗಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳೆ ವಿಸ್ತರಣೆಗೆ ಉರುಳಾಗುವ ಸಾಧ್ಯತೆ ಕಲ್ಪಿಸಿದ್ದು ಇದರಿಂದ ಮಂತ್ರಿಗಿರಿ ಆಸೆ ಹೊತ್ತು ಹೊಸ ಸೂಟ್ ಬೂಟ್ ಖರೀದಿಸಿದ್ದ ಶಾಸಕರು ಬೆಪ್ಪಾಗಿದ್ದಾರೆ.

ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ರಾಜಕೀಯ ವಲಯದಲ್ಲಿ ನಿರ್ಧರಿತ ಸಂಪುಟ ವಿಸ್ತರಣೆಗೆ ನಾ ಮುಂದು… ತಾ ಮುಂದು… ಎಂದು ಟ್ರಾಫಿಕ್ ಹೆಚ್ಚಿದ್ದರಿಂದ ಯಾರಿಗೆ ಸಚಿವ ಸ್ಥಾನ ಕೊಡುವುದು ಎಂಬ ಚಿಂತೆ ವ್ಯಕ್ತವಾಗಿದೆ. ಜೆಡಿಎಸ್ ವಲಯದಲ್ಲಿ ವರಿಷ್ಠರು ರಾಜ್ಯದಲ್ಲೇ ಇರುವುದರಿಂದ ಜೆಡಿಎಸ್ ಪಡಸಾಲೆ ಕ್ಲಿಯರ್. ಆದರೆ ರಾಷ್ಟ್ರವ್ಯಾಪಿ ಪಕ್ಷ ಕಾಂಗ್ರೆಸ್ ಸಚಿವಾಕಾಂಕ್ಷಿಗಳು ಪ್ರತ್ಯಕ್ಷವಾಗಿ ಬೆಳಗಾವಿ ಸದನದಲ್ಲಿ ಹಾಜರಿದ್ದರೂ ಮಾನಸಿಕವಾಗಿ ರಾಜಧಾನಿ ದೆಹಲಿಯಲ್ಲಿ ಸುತ್ತುತ್ತಿದ್ದಾರೆ.

ಸದನ ಪ್ರಾರಂಭದಿಂದ ಶಾಂತವಾಗಿಯೇ ಇದ್ದ ಬಿಜೆಪಿ ಕೆರಳಿ ಕೆಂಡವಾದ ನಂತರ ಸಮ್ಮಿಶ್ರ ಸರಕಾರಕ್ಕೆ ಏದುಸಿರು ಉಂಟಾಗಿದೆ. ಬುಧವಾರ ಸಂಜೆ ಬಿಜೆಪಿ ಮತ್ತು ಸರಕಾರದ ನಡುವೆ ನಡೆದ ಕ್ಲ್ಯಾಶ್ ಮತ್ತು ಗುರುವಾರವೂ ಅದೇ ಗುದ್ದಾಟ ಮುಂದುವರೆದದ್ದರಿಂದ ಗುರುವಾರ ಎರಡೂ ಬಾರಿ ವಿಧಾನಸಭೆಯನ್ನು ಸ್ಪೀಕರ್ ರಮೇಶಕುಮಾರ ಮಧ್ಯಾಹ್ನ 3ರವರೆಗೆ ಮುಂದೂಡಿದ್ದು, ಸರಕಾರ ಮತ್ತು ಸಮ್ಮಿಶ್ರ ಪಕ್ಷಗಳಿಗೆ ತುರುಚಿಕೊಳ್ಳಲಾಗದ ಮುಳ್ಳಾಗಿ ಪರಿಣಮಿಸಿತು.

ಬುಧವಾರ ಸಂಜೆ ಬಿಜೆಪಿಯ ಸಚೇತಕರೊಬ್ಬರು ಕರೆದ ಔತನ ಕೂಟದಲ್ಲಿ ಕಾಂಗ್ರೆಸ್ ಸಚಿವ ರಮೇಶ ಜಾರಕಿಹೊಳಿ ಮತ್ತಿತರರು ಭಾಗವಹಿಸಿದ್ದ ಬೆಳವಣಿಗೆ, ಬೆಳಿಗ್ಗೆ ಕಾಂಗ್ರೆಸ್ ವಲಯದಲ್ಲಿ ತಲ್ಲಣ ಹಾಗೂ ಗುಸುಗುಸು ಚರ್ಚೆಗೆ ಕಾರಣವಾಯಿತು. ಸಿಎಲ್ ಪಿ ಹಾಗೂ ಸಂಪುಟ ಸಭೆಗೆ ಗೈರಾಗಿದ್ದ ಸಚಿವ ರಮೇಶ ಜಾರಕಿಹೊಳಿ ಬುಧವಾರ ಸಂಜೆ ಗಂಟಲು ನೋವಿನಿಂದ ಚೇತರಿಸಿಕೊಂಡು ಬಿಜೆಪಿ ಔತನಕೂಟದಲ್ಲಿ ಭಾಗವಹಿಸಿದ್ದರು. ರಮೇಶ ಜಾರಕಿಹೊಳಿ ಬಿಜೆಪಿಯೊಂದಿಗಿನ ಸಖ್ಯವನ್ನು ಹಿರಿಯ ಸಚಿವ ಆರ್. ವಿ. ದೇಶಪಾಂಡೆ ಅದೊಂದು ವೈಯಕ್ತಿಕ ಸೌಜನ್ಯ ಬಿಡ್ರೀ ಎಂದು ಮಾಧ್ಯಮದವರನ್ನೇ ಬಾಯಿ ಮುಚ್ಚಿಸಿದ್ದರು.

ದ್ವಿ ಸದನದಲ್ಲಿ ಪ್ರತಿಪಕ್ಷಗಳ ಕಾಡಾಟ ಹೊರಗೆ ಸ್ವಪಕ್ಷೀಯರ ತಲೆನೋವು ಸಮ್ಮಿಶ್ರ ಸರಕಾರ ಮತ್ತು ದೊಡ್ಡ ಕಾಂಗ್ರೆಸ್ ಗೆ ಆಘಾತ ನೀಡಿದೆ. ಊರು ಸುಟ್ಟರು ಹಣುಮಪ್ಪ ಹೊರಗೆ ಎನ್ನುವಂತೆ ರಾಜ್ಯಾಧಿಕಾರ ನಡೆಸಿರುವ ಜೆಡಿಎಸ್ ಗೆ ಯಾವ ಬಾಧೆಯೂ ಆಗಿಲ್ಲ, ಆಗಲಾರದು. ಸಚಿವಾಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ದಿನೇಶ ಗುಂಡೂರಾವ್ ಅವರಿಗಿಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿಯೇ ಹೆಚ್ಚು ವಿಶ್ವಾಸ ಇಟ್ಟಿರುವುದು ಗಮನಾರ್ಹ. ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಯುವರಾಜ ರಾಹುಲ್ ಗಾಂಧಿ ಶುಕ್ರವಾರ ಬುಲಾವ್ ನೀಡಿದ್ದರಿಂದ ಗುರುವಾರವೇ ಕಾಂಗ್ರೆಸ್ ಆಕಾಂಕ್ಷಿಗಳ ದಂಡು ದೆಹಲಿಯತ್ತ ಹಾರಲು ಬ್ಯಾಗ್ ರೆಡಿ ಮಾಡಿಕೊಂಡಿತ್ತು. ರಾಜ್ಯದ ಕಲ್ಯಾಣಕ್ಕಿಂತ ತಮ್ಮ ಸೀಟಿನ ಬಿಗಿಹಿಡಿತಕಕೆ ಮುಂದಾಗಿದ್ದ ಶಾಸಕರು ಸಚಿವರಾದ ಮೇಲೆ ಏನು ಕಡಿದು ಕಟ್ಟುತ್ತಾರೆ ಎಂಬ ಕುತೂಹಲ ಸಾರ್ವಜನಿಕರಿಗೆ ಬೆಳಗಾವಿ ಅಧಿವೇಶನವೆ ಸಾಕ್ಷಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸರಕಾರದ ಅರ್ಧ ಭಾಗವೆಂದೇ ಗುರುತಿಸಿಕೊಂಡ ಡಾ. ಜಿ. ಪರಮೇಶ್ವರ ಇಂದು ರಾತ್ರಿಯೇ ದೆಹಲಿಗೆ ತೆರಳಲಿರುವುದು ಖಚಿತ ಮೂಲ ಸ್ಪಷ್ಟಪಡಿಸಿತು.