SHARE

ಬೆಳಗಾವಿ: ಜಯಶ್ರೀ ಸೂರ್ಯವಂಶಿ ಜೆಡಿಎಸ್ ಪಕ್ಷದ ಸಂಪರ್ಕದಲ್ಲಿ ಸದ್ಯ ಇಲ್ಲವೇ ಇಲ್ಲ ಅವರನ್ನು ಕಳೆದ ವರ್ಷಕ್ಕೂ ಹಿಂದೆಯೇ ಪಕ್ಷದಿಂದ ಹೊರಹಾಕಲಾಗಿದೆ ಎಂದು ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೇಘಾ ಕುಂದರಗಿ ಸ್ಪಷ್ಠಪಡಿಸಿದ್ದಾರೆ. ವೈಯಕ್ತಿಕವಾದ ಅವರ ವಿಚಾರಗಳಿಂದ ಜೆಡಿಎಸ್ ಪಕ್ಷಕ್ಕೆ ಮಜುಗುರ ಆಗುವುದು ತರವಲ್ಲ. ಕಳೆದ ಒಂದು ವರ್ಷದಿಂದ ಜಯಶ್ರೀ ನಮ್ಮ ಪಕ್ಷದ ಸಂಪರ್ಕದಲ್ಲಿಲ್ಲ. ಸೂಕ್ತ ಎಚ್ಚರಿಕೆ ಕೊಟ್ಟು ಆಗಲೇ ಹೊರಹಾಕಲಾಗಿದೆ. ಜಯಶ್ರೀ ಸೂರ್ಯವಂಶಿ ಪೂರ್ವಾಪರ ಮಾಹಿತಿ ಪಕ್ಷಕ್ಕೆ ಗೊತ್ತಿಲ್ಲ. ಸದ್ಯ ಜಯಶ್ರೀ ನಮ್ಮ ಪಾರ್ಟಿಯಲ್ಲಿ ಯಾವ ಪ್ರಧಾನ ಕಾರ್ಯದರ್ಶಿಯೂ ಇಲ್ಲ ಎಂದು ಮೇಘಾ ಕುಂದರಗಿ ಸ್ಪಷ್ಠಪಡಿಸಿದ್ದಾರೆ.

ಏನಿದು ಕಹಾನಿ: ಇದು ನಿಜಕ್ಕೂ ಯಾವುದೇ ಸಿನಿಮಾ ಸ್ಟೋರಿಗೆ ಕಡಿಮೆಯಿಲ್ಲದ ಸ್ಟೋರಿ. ಎರಡು ಹೆಂಡಿರ ಗಂಡನ ಸಂಸಾರ ಸರಿಪಡಿಸಲು ಬಂದವಳೇ ಆತನ ಜೊತೆ ಸಂಸಾರ ನಡೆಸಿರುವ ಕಥೆ ಇದು. ಗೋಕಾಕ್​ ನಿವಾಸಿ ಅಜೀತ ಮಾದರ ಪ್ರಸ್ತುತ ಬಿಹಾರದಲ್ಲಿ ಸಿಆರ್​ಪಿಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

ಮೊದಲ ಬಾರಿಗೆ 2011ರಲ್ಲಿ ದಾಕ್ಷಾಯಿಣಿ ಎಂಬುವರ ಜೊತೆಗೆ ಈತನ ಮದುವೆ ಆಗಿತ್ತು. ಬಳಿಕ ಪ್ರೇಯಸಿ ಸೀಮಾ ಚೌಹ್ವಾಣ್‍ಳ ಜೊತೆಗೆ ಪಾಟ್ನಾದಲ್ಲಿ ಸಂಸಾರ ನಡೆಸಿದ. ಇದಕ್ಕೂ ಮೊದಲು ಸೀಮಾ ಬೇರಿಬ್ಬನ ಜೊತೆಗೆ ವಿವಾಹವಾಗಿದ್ದರೂ, ಅಜೀತನ ಜೊತೆ ತೆರಳಿದ್ದಳಂತೆ. ಪತ್ನಿ ಕಾಣೆಯಾದ ಬಗ್ಗೆ ಆಕೆಯ ಪತಿ ಸಂತೋಷ ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎರಡನೇ ಹೆಂಡತಿ ಸುದ್ದಿ ಮೊದಲ ಪತ್ನಿ ದಾಕ್ಷಾಯಿಣಿಗೆ ಗೊತ್ತಾಗುತ್ತಿದ್ದಂತೆ, ಆಕೆ ಸಿಆರ್​ಪಿಎಫ್ ​ಗೆ ದೂರು ನೀಡಿದ್ದಳು. ಸಾಂಸಾರಿಕ ಜೀವನ ಬಗೆಹರಿಸಿಕೊಂಡು ಬರುವದಾಗಿ ಕಮಾಂಡರ್ ಅಜೀತ್‍ 15 ದಿನ ರಜೆ ಪಡೆದು ಮನೆಗೆ ಬಂದಿದ್ದನಂತೆ.

ಬಳಿಕ ನ್ಯಾಯ ಕೊಡಿಸುವಂತೆ ದಾಕ್ಷಾಯಿಣಿ ಹಾಗೂ ಸೀಮಾ ಇಬ್ಬರು ಸೇರಿ ಸಮಾಜ ಸೇವಕಿ ಹಾಗೂ ಜೆ.ಡಿ.ಎಸ್ ನಾಯಕಿ ಜಯಶ್ರೀ ಸೂರ್ಯವಂಶಿ ಮೊರೆ ಹೋಗಿದ್ದರು. ಆದರೆ ವಿಚಿತ್ರ ವೆಂದರೆ ಈ ಇಬ್ಬರಿಗೂ ನ್ಯಾಯ ಕೊಡಿಸಲು ಬಂದಿದ್ದ ಜಯಶ್ರೀ ಸೂರ್ಯವಂಶಿಗೆ ಯೋಧ ಅಜೀತ್ ಮೇಲೆ ಪ್ರೀತಿಯಾಗಿದೆ. ಇಬ್ಬರೂ ಸೇರಿ ಕಳೆದ ಡಿಸೆಂಬರ್ 31ರಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಮೊದಲ ಪತ್ನಿಗೆ ವಿಚ್ಛೇದನೆ ಕೊಡದೇ ಹಾಗೂ ಈತನ ನಂಬಿ ಬಂದಿದ್ದ ಸೀಮಾಗೆ ದಾರಿ ತೋರಿಸದೇ ಅಜಿತ್ ಜಯಶ್ರೀ ಜತೆ ಸದ್ಯ ಸಂಸಾರ ನಡೆಸುತ್ತಿದ್ದಾನೆ. ಜಯಶ್ರೀ ಜೆಡಿಎಸ್‍ನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂದು ತಿಳಿದುಬಂದಿದೆ.

ಇಬ್ಬರೂ ಮಹಿಳೆಯರು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ಬೀಹಾರ ದಲ್ಲಿ ತನ್ನ ಪತಿಯ ಜತೆಗಿರುವ ಜಯಶ್ರೀ, ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಯಾವುದೇ ಠಾಣೆಗೆ ಹೋದರೂ ನಿಮಗೆ ನ್ಯಾಯ ಸಿಗಲ್ಲವೆಂದು ಧಮ್ಕಿ ಹಾಕುತ್ತಿದ್ದಾಳೆ ಎನ್ನುವುದು ಮೊದಲ ಪತ್ನಿ ದಾಕ್ಷಾಯಣಿಯ ಆರೋಪವಾಗಿದೆ.ಈ ಕುರಿತು ದಾಕ್ಷಾಯಣಿ ಮಹಿಳಾ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ.