SHARE

ಬೆಳಗಾವಿ: ಮುಂಬರುವ ಸಂಸತ್ ಚುನಾವಣೆಗೆ ಮತದಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇಂದು ಆಕರ್ಷಕ ಸೈಕಲ್ ರ್ಯಾಲಿ ನಗರದಲ್ಲಿ ಹಮ್ಮಿಕೊಂಡಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ಜಾಗೃತ ರ್ಯಾಲಿಗೆ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಡಿಸಿ ಕಚೇರಿಯಿಂದ ಚಾಲನೆ ನೀಡಿದರು.ಉತ್ತಮ ಸರಕಾರ ಆಯ್ಕೆ ಮಾಡಲು ಮತದಾರರು ಜಾಗೃತರಾಗಿ ಮತದಾನ ಮಾಡುವುದು ಅತ್ಯಾವಶ್ಯಕ. ನಾಗರಿಕರು ಹಾಗೂ ವಿಶೇಷವಾಗಿ ಯುವಜನತೆ ಕಡ್ಡಾಯ ಮತದಾನದತ್ತ ಗಮನ ಹರಿಸಬೇಕು. ಮತದಾನ ಯಾದಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಸ್ಪಿ ಸುಧೀರಕುಮಾರ ರೆಡ್ಡಿ ಮಾತನಾಡಿ ಸರಕಾರದಿಂದ ರಕ್ಷಣೆ, ಸಹಾಯ ಸವಲತ್ತು ಹಕ್ಕುಬದ್ಧವಾಗಿ ಸಂಪಾದಿಸಲು ಅಷ್ಟೇ ಹಕ್ಕುಬದ್ಧವಾಗಿ ನಾವೂ ಸಹ ಸರಕಾರವನ್ನು ಮತದಾನ ಮಾಡಿ ಆಯ್ಕೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಜಗತ್ತಿನಾದ್ಯಂತ ಕೆಲಸ ಕಾರ್ಯ ನಿಮಿತ್ತ ಪಸರಿಸಿರುವ ಕನ್ನಡಿಗರು ಮತದಾನ ಮಾಡುವುದಕ್ಕಾಗಿ ತಾಯ್ನಾಡಿಗೆ ಬಂದು ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.ಜಿಪಂ. ಸಿಇಓ ಕೆ. ವಿ. ರಾಜೇಂದ್ರನ್ ಮಾತನಾಡಿ ಆಸೆ, ಆಮೀಷ, ಒತ್ತಡ ತಂತ್ರಗಳಿಗೆ ಬಲಿಯಾಗದೇ ಸಮಾಜವನ್ನು ಮುನ್ನಡೆಸುವ ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡುವುದು ಪ್ರತಿ ನಾಗರಿಕನ ಆದ್ಯ ಕರ್ತವ್ಯವೆಂದು ‘ಮತದಾನ’ ಪ್ರಕ್ರಿಯೆಯನ್ನು ಪರಿಗಣಿಸಲಾಗಿದೆ. ನಾವು- ನಮ್ಮಿಂದ-ನಮಗಾಗಿ ಸರಕಾರ ರಚಿಸುವಾಗ ಬೆಟ್ಟದಷ್ಟು ಜವಾಬ್ದಾರಿ ಶ್ರೀ-ಸಾಮಾನ್ಯನಿಗಿದೆ. ಸರಕಾರದ ನಿಜವಾದ ಅಧಿಕಾರ ಮತ್ತು ಬದ್ಧತೆ ಜನರ ಕೈಯಲ್ಲಿದೆ. ಜನತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದರು.’…ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ಹೆಮ್ಮೆಯಿಂದ…’ ಘೋಷವಾಕ್ಯ ಹೊತ್ತ ಸೈಕಲ್ ರ್ಯಾಲಿಯನ್ನು ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿತು. ಸರಕಾರಿ ಅಧಿಕಾರಿಗಳು, ರೈಡರ್ಸ್ ಕ್ಲಬ್, ವೇಣುಗ್ರಾಮ ಸೈಕ್ಲಿಂಗ್ ಕ್ಲಬ್, ಕ್ರೀಡಾ ಇಲಾಖೆ ಹಾಗೂ ನೂರಾರು ಸಾರ್ವಜನಿಕರು ಸೈಕಲ್ ತುಳಿದರು.