SHARE

ಬೆಳಗಾವಿ: ಕಾಂಗ್ರೆಸ್ ನಾಯಕರ ಪೂರ್ವಭಾವಿ ಸಭೆ ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಂಸತ್ ಚುನಾವಣೆಗೆ ಪೂರ್ವಭಾವಿಯಾಗಿ ತಯಾರಿ ಮಾಡಿಕೊಳ್ಳಲು ಇಂದು ಬೂತ್, ಬ್ಲಾಕ್ ಮಟ್ಟದ ಹಾಗೂ ಜಿಲ್ಲಾಮಟ್ಟದ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಶಾಸಕಿ ಡಾ. ಅಂಜಲಿ ನಿಂಬಾಳಕರ, ವೀರಕುಮಾರ ಪಾಟೀಲ, ರಾಜು ಸೇಠ್, ಫಿರೋಜ್ ಸೇಠ್, ಸದಾ ಕೋಲಕಾರ, ಗಜು ಧರನಾಯಕ, ವಿನಯ ನಾವಲಗಟ್ಟಿ, ಶಿವಕಾಂತ್ ಸಿದ್ನಾಳ ಸೇರಿ ಬ್ಲಾಕ್ ಅಧ್ಯಕ್ಷರು ಭಾಗವಹಿಸಿದರು.

ಪಕ್ಷವಿರೋಧಿ ಚಟುವಟಿಕೆ ಮಾಡುವವರು, ಸರಕಾರವನ್ನು ಮಜುಗುರಕ್ಕೆ ತಳ್ಳಿ ಮುಂಬಯಿಗೆ ತೆರಳಿದವರನ್ನು ಪಕ್ಷದಿಂದ ಹೊರಹಾಕುವಂತೆ, ಪಕ್ಷದಲ್ಲಿ ಶಿಸ್ತು ಮೂಡಿಸುವಂತೆ ಮಾಜಿ ಶಾಸಕ ಫಿರೋಜ್ ಸೇಠ್ ತರಾಟೆಗೆ ತೆಗೆದುಕೊಂಡರು. ರಾಯಭಾಗ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಮತ್ತು ಕುಡಚಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಲು ಪಕ್ಷದೊಳಗಿನವರೇ ಚಿತಾವಣೆ ಮಾಡಿದ್ದಾರೆ ಎಂದು ಸೇಠ್ ಆಕ್ರೋಶ ವ್ಯಕ್ತಪಡಿಸಿದ್ದು ಹೊರಬಿದ್ದಿದೆ. ಪಾರ್ಟಿಗೆ ಅನಾನುಕೂಲ ಮಾಡಿದ ದೊಡ್ಡ ಮತ್ತು ಸಣ್ಣ ‘ಚೋರ’ರನ್ನು ಪಕ್ಷದೊಳಗೆ ಕರೆದುಕೊಳ್ಳದಂತೆ ಸೇಠ್ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಲಕ್ಷ ಮತದ ಅಂತರದಿಂದ ಗೆಲ್ಲಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತವಾಯಿತು.