ಅಹ್ಮದಾಬಾದ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್, ರಾಜಕೀಯ ತಂತ್ರಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ನಲ್ಲಿ ಸಮಾವೇಶಗೊಂಡಿರುವ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ. 58 ವರ್ಷಗಳ ಬಳಿಕ ಗುಜರಾತ್ನಲ್ಲಿ ಮತ್ತೆ ಕಾಂಗ್ರೆಸ್ ತನ್ನ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದೆ.ಕಾರ್ಯಕಾರಣಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಅವರ ಸಹೋದರಿ ಪ್ರಿಯಾಂಕ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಭಾಗವಹಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ಗೆ ಸೇರ್ಪಡೆಯಾದ ಪಟಿದಾರ್ ಹೋರಾಟದ ರುವಾರಿ ಹಾರ್ದಿಕ್ ಪಟೇಲ್ ಸಹ ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಕಾರ್ಯವನ್ನು ಪ್ರಧಾನಿ ಮೋದಿ ತವರಿನಿಂದಲೇ ಪ್ರಾರಂಭಿಸಿರುವುದು ಗಮನ ಸೆಳೆದಿದೆ.