SHARE

ಬೆಳಗಾವಿ: ಕೇಂದ್ರದಲ್ಲಿ ಲೋಕಪಾಲ ಜಾರಿಯಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ 79ಎಬಿ ಕಂದಾಯ ಕಾನೂನು ದುರ್ಬಳಕೆ ಪ್ರಕರಣದಲ್ಲಿ ಜೈಲು ಪಾಲಾಗುವುದು ನಿಶ್ಚಿತ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಗುಡುಗಿದ್ದಾರೆ. ಕಂದಾಯ ಕಾನೂನಿನ ದುರ್ಬಳಕೆ ತನ್ನ ಸರಕಾರದ ಅವಧಿ ಉದ್ದಕ್ಕೂ ಮಾಡಿರುವ ಸಿದ್ದರಾಮಯ್ಯ, ಶಾಸಕರನ್ನು ಖುಷಿಯಲ್ಲಿಡುವ ಪ್ರಯತ್ನ ಮಾಡುತ್ತ ಬಂದಿದ್ದಾರೆ.

79ಎಬಿ ದುರ್ಬಳಕೆ ಅತಿ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗಿದೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಮೇಲೆ ಡಿನೋಟಿಫಿಕೇಶನ್ ಆರೋಪದಲ್ಲಿ ಜೈಲಿಗೆ ಕಳಿಸುವ ಪ್ರಯತ್ನ ನಡೆಯಿತು. ಅದರಂತೆ ಸಿದ್ದರಾಮಯ್ಯ ಕೂಡ ಜೈಲು ಪಾಲಾಗಬೇಕಾಗುತ್ತದೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಅವ್ಯವಹಾರ ಹಾಗೂ ಕಾನೂನು ದುರ್ಬಳಕೆಯ ವಿರುದ್ಧ ಕೇಂದ್ರ ಲೋಕಪಾಲ್ ಸಂಸ್ಥೆ ಮತ್ತು ನ್ಯಾಯಾಲಯದ ಮೊರೆ ಸದ್ಯದಲ್ಲೇ ಹೋಗಲಾಗುವುದು ಎಂದು ಘೋಷಿಸಿದರು.

ಕಾಂಗ್ರೆಸ್ ಪಕ್ಷ ಎನ್ನುವುದು ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿ, ದಿನೇಶ ಗುಂಡೂರಾವ್ ಅವರ ಮನೆಯ ಆಸ್ತಿಯಲ್ಲ. ಇವರು ಸಂಸತ್ ಟಿಕೇಟ್ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ತುಮಕೂರು ಕ್ಷೇತ್ರ ಜೆಡಿಎಸ್ ಗೆ ಏಕೆ ಬಿಟ್ಟುಕೊಡಬೇಕಿತ್ತು ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಒಂದು ಸಾರಿ ಜೈಲಿಗೆ ಹೋಗಿರಬಹುದು ಆದರೆ ಸಿದ್ದರಾಮಯ್ಯ ಹತ್ತು ಸಾರಿ ಜೈಲು ಪಾಲಾಗುತ್ತಾರೆ ಎಂದು ಪಕ್ಷದಲ್ಲಿ ಶಾಸಕರಿಗೆ ಒಂದು ಕಾನೂನು, ಪಕ್ಷದ ಕಾರ್ಯಕರ್ತರಿಗೆ ಒಂದು ಕಾನೂನು ಕಾಂಗ್ರೆಸ್ನಲ್ಲಿ ನಡೆದಿದೆ. ಸರಕಾರಕ್ಕೆ ಧಕ್ಕೆ ಮಾಡುವ ಹೆದರಿಕೆ ಹಾಕುತ್ತ, ಪ್ರತಿಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ರಮೇಶ ಜಾರಕಿಹೊಳಿ ಮತ್ತು ಅವರ ಬೆಂಬಲಿಗ ಶಾಸಕರನ್ನು ಪಕ್ಷದಿಂದ ಹೊರಹಾಕದೇ ಸಿದ್ದರಾಮಯ್ಯ ಕ್ಷುಲಕ್ ರಾಜಕಾರಣ ಮಾಡುತ್ತಿದ್ದಾರೆ. ಕೆಲ ಕಾರ್ಯಕರ್ತರ ಮೇಲೆ ಪಕ್ಷ ವಿರೋಧಿ ಆರೋಪ ಹೊರಿಸಿ ನೊಟೀಸ್ ಕೊಡುವ ಕೆಪಿಸಿಸಿಗೆ ಪಕ್ಷ ವಿರೋಧ ಪುಂಡ ಶಾಸಕರನ್ನು ಹೊರ ಹಾಕಲು ಧೈರ್ಯವಿದೆಯೇ ಎಂದು ಪ್ರಶ್ನಿಸಿದರು.