SHARE

ಬೆಳಗಾವಿ: 110 ವಯಸ್ಸಿನ, ನಡುಬಾಗಿದ ಅಜ್ಜಿ ತಾನೇ ಬಸ್ ಹಿಡಿದು ನೂರಾರು ಕಿಮೀ ಆಚೆಯ ಮಹಾನಗರಕ್ಕೆ ಮೊಮ್ಮಕ್ಕಳ ಬಳಿ ಒಂಟಿಯಾಗಿ ತೆರಳುತ್ತಾರೆ ಎಂದರೆ ನಂಬುತ್ತೀರಾ!? ಹೌದು ನಂಬಲೆಬೇಕು, ಈ ಅಜ್ಜಿಗೆ ಬರೋಬ್ಬರಿ 110 ವಯಸ್ಸು ಅವರ ಆಯು, ಆರೋಗ್ಯ & ಚೈತನ್ಯದ ಜೀವನಶೈಲಿಯೇ ಅಮೋಘ.
ಮಾನವ ಜೀವಿಯ ನಿಗದಿತ ಆಯುಷ್ಯದ ಗೆರೆ ದಾಟಿದ್ದರೂ ಅವರ ಕಣ್ಣಿಗೆ ಕನ್ನಡಕವಿಲ್ಲ, ತನ್ನ ಆರೈಕೆಗೆ ಇನ್ನೊಬ್ಬರ ಸಹಾಯದ ಹಂಗಿಲ್ಲ, ತನ್ನ ಬಟ್ಟೆ ತಾನೇ ಒಗೆಯುತ್ತಾರೆ, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾರೆ, ಮಾತು ಸ್ಮೃತಿಯಂತೂ ಸ್ಪಷ್ಠ ಸ್ಪಷ್ಠ!110-year-old woman Gurusangammaಗುರುಸಂಗಮ್ಮ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಗ್ರಾಮದ ಶತಾಯುಷಿ! ತನಗೆ ತನ್ನ ಮೊಮ್ಮಕ್ಕಳ ನೆನಪಾದರೆ ದೂರದ ಬೆಂಗಳೂರಿಗೆ, ಬೆಳಗಾವಿಗೆ ಇಲ್ಲವೇ ಇತರ ನಗರಕ್ಕೆ ಒಂಟಿಯಾಗಿ ಬಸ್ ಏರಿ ಅವರನ್ನು ಆ ಮಹಾನಗರದಲ್ಲಿ ಸೇರಿಕೊಳ್ಳುತ್ತಾಳೆ. ಆಕೆಯ ಮೊಮ್ಮಕ್ಕಳೇ ದೊಡ್ಡವರಾಗಿ ಈಗ ಸರಕಾರಿ ಅಧಿಕಾರಿಗಳಾಗಿ ರಾಜ್ಯದ ಇತರ ಮಹಾನಗರಗಳಲ್ಲಿ ವಾಸವಾಗಿದ್ದಾರೆ. ತನ್ನ ಬಳಿ ಚಿಕ್ಕ ಮೊಬೈಲ್ ಹೊಂದಿರುವ ಅಜ್ಜಿ ಬೇಸಿಗೆ, ಮಳೆ ಇಲ್ಲವೇ ಚಳಿಗಾಲ ಲೆಕ್ಕಿಸದೇ ಸರಕಾರಿ ಬಸನಲ್ಲಿ ಪ್ರಯಾಣಿಸುತ್ತಾಳೆ. ತನ್ನ ಬಂಧು ಬಾಂಧವರಿಗೆ ಇನ್ನೊಬ್ಬರ ಸಹಾಯದಿಂದ ಕರೆ ಮಾಡಿಸಿ ಅವರ ಮನೆ ತಲುಪುವ ಅಜ್ಜಿಯ ಸಾಹಸ ಕೇಳುಗರ ಮನಸ್ಸಿಗೆ ಅಮಿತಾಶ್ಚರ್ಯ ತಂದುಕೊಡುತ್ತದೆ.

ಬೆಳಗಾವಿ ಅರಣ್ಯಾಧಿಕಾರಿ ಸಂಗಮೇಶ ಪ್ರಭಾಕರ ಅವರ ತಾಯಿಯ ತಾಯಿ ಈಗಲೂ ನಡುವಯಸ್ಕರರನ್ನು ನಾಚಿಸುವಂತೆ ಜೀವನಶೈಲಿ ಹೊಂದಿರುವ ಬಗ್ಗೆ ಮನೆಯ ಜನ ಆನಂದ ವ್ಯಕ್ತಪಡಿಸುತ್ತಾರೆ. ತನ್ನ ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದು ಸಾಗಿ ಬೆಳಗಾವಿ ಬಸ್ ಏರಿದರೆ, ಈಕಡೆಯ ಮೊಮ್ಮಕ್ಕಳಿಗೆ ಅವಳ ಆಗಮನದ ಸುದ್ದಿಯೇ ಇರುವುದಿಲ್ಲ. ಒಂದೊಮ್ಮೆ ಅಜ್ಜಿ ಬೆಳಗಾವಿಗೆ ಬಂದಿಳಿದು ಮೊಮ್ಮಗನಿಗೆ ನೂರಾರು ಬಾರಿ ಕರೆ ಮಾಡಿದ್ದು, ಮೊಬೈಲ್ ಸಿಗ್ನಲ್ ಹೊರತಾದ ಜಾಗದಲ್ಲಿದ್ದ ಮೊಮ್ಮಗನ ಸಂಪರ್ಕ ಸಿಗದೇ ಶಾಂತವಾಗಿಯೇ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಬಗ್ಗೆ ಅಧಿಕಾರಿ ಸಂಗಮೇಶ ಪ್ರಭಾಕರ ಭಾವುಕ ಕಣ್ಣೀರಾಗುತ್ತಾರೆ. ದೂರದ ಅರಣ್ಯದಲ್ಲಿದ್ದ ಮೊಮ್ಮಗನಿಗೆ ಸಿಕ್ಕ ಮೊಬೈಲ್ ಸಿಗ್ನಲ್ ವೇಳೆ ಅಜ್ಜಿಯ ಮಿಸ್ಡಕಾಲ್ ಮೆಸೇಜ್ ಮೂಲಕ ತನ್ನ ಅಜ್ಜಿಯನ್ನು ಮನೆಗೆ ಕರೆಸಿಕೊಳ್ಳಲು ಹಿಂದೊಮ್ಮೆ ಸಹಾಯವಾಗಿತ್ತು ಎಂದು ಅಜ್ಜಿಯ ಮೇಲಿನ ಪ್ರೀತಿ ಬಿಚ್ಚಿಟ್ಟಿದ್ದಾರೆ. ಒತ್ತಡರಹಿತ ಜೀವನ, ಗುಣಮಟ್ಟ ಆಹಾರ ಮತ್ತು ಕನಿಷ್ಠ 9 ಗಂಟೆ ನಿದ್ದೆಯೇ ಅಜ್ಜಿಯ ಆಯು-ಆರೋಗ್ಯ ಮತ್ತು ಚೈತನ್ಯಕ್ಕೆ ಕಾರಣ ಎನ್ನುವುದು ಅವರ ವಿಶ್ಲೇಷಣೆ. ಶುದ್ದ ಚರ್ಮದ ಚಪ್ಪಲಿ, ಊರುಗೋಲಿಗೆ ಬೆತ್ತ, ದೂರದೂರಿಗೆ ತನ್ನ ಬಟ್ಟೆ ಅವಳ ಸಂಗಾತಿ. ಮಳೆ, ಗಾಳಿ, ದಿಕ್ಕು-ದೆಸೆ, ವಾತಾವರಣದ ಬದಲಾವಣೆ, ಅಂದಿನ ಇಂದಿನ ಜೀವನ ಶೈಲಿ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಆಕೆಯ ಕರಾರುವಕ್ಕಾದ ಅಭಿಪ್ರಾಯಗಳು ಇಂದಿನ ಬಹುಕಲಿತ ವಿದ್ಯಾವಂತರಿಗೆ ಬಾರದು. ಅಜ್ಜಿ ಯಾವಾಗಲಾದರೂ ಬರಬಹುದು ಎಂಬ ಕಾರಣಕ್ಕೆ ಅರಣ್ಯಾಧಿಕಾರಿ ಸಂಗಮೇಶ ಬಾಡಿಗೆ ಕಾರು ಚಾಲಕರನ್ನೇ ಅನಿರೀಕ್ಷಿತ ಅಜ್ಜಿ ಮೊಬೈಲ್ ಕರೆ ನಿರೀಕ್ಷಿಸಲು ಅಣಿಗೊಳಿಸಿದ್ದಾರೆ.

ನಡುವಯಸ್ಸು ದಾಟುವ ಇಂದಿನ ಜನಾಂಗಕ್ಕೆ ತಗಲುವ ನೋರೊಂದು ರೋಗಗಳ ಬಗೆಗೆ ಅಜ್ಜಿಗೆ ಗೊತ್ತಿಲ್ಲ. ನಡುಬಾಗಿದ್ದು ಬಿಟ್ಟರೆ ಮತ್ತು ಆರೋಗ್ಯ ತೊಂದರೆಯಿಲ್ಲ. ತಾನು ತನ್ನ ಕೆಲಸ ತನ್ನ ಜೀವನ ಅವಳಿಗೆ ರೂಢಿ. ತನ್ನ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ನೆನಪಾದರೆ ಅವಳು ನಿಲ್ಲದೇ ಬಸ್ಸು ಏರಿ ಹೊರಟೆಬಿಡುತ್ತಾಳೆ. ಎರಡು ದಿನ ಅವಳಿಗೆ ಬಹಳವಾಯ್ತು, ಮಹಾನಗರದಲ್ಲಿ ಯಾರಾದರೂ ಬಸ್ ಏರಿಸಿದರೆ ಅವಳು ಮತ್ತೆ ತನ್ನೂರು ಇಂಗಳಗೇರಿಗೆ ವಾಪಸ್. ಆರೋಗ್ಯ ಆಯುಷ್ಯ ಮತ್ತು ಚೈತನ್ಯ ಬೆಳೆಸಿಕೊಳ್ಳಲು ನಮಗೆ ಇದಕ್ಕಿಂತ ಹೆಚ್ಚಿನ ವಾಸ್ತವ ಏನು ಬೇಕು!