SHARE

ಖಾನಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಹಳ್ಳಿಗಳಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ 10 ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಈ ಯೋಜನೆಯಡಿ 40 ಸಾವಿರ ಕೋಟಿ ಮೊತ್ತದ ಬ್ರಹತ್ ಅನುದಾನದಿಂದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹಂತ-ಹಂತವಾಗಿ ಈ ಯೋಜನೆಯನ್ನು ಕಡೆಗಣಿಸಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಯೋಜನೆಗೆ ನೀಡಬೇಕಿದ್ದ 2 ಸಾವಿರ ಕೋಟಿಯಷ್ಟು ಬಾಕಿಯನ್ನು ಸಂಬಂಧಿಸಿದವರಿಗೆ ನೀಡದೇ ಸತಾಯಿಸುತ್ತಿದೆ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಹೇಳಿದರು.

ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಳ್ಳಿಗಳು ಹೆಚ್ಚಾಗಿರುವ ಮತ್ತು ಕೃಷಿ ಮುಖ್ಯ ಉದ್ಯೋಗವಾಗಿರುವ ನಮ್ಮ ದೇಶದಲ್ಲಿ ಡಿಜಿಟಲ್, ರೋಬೋಟ್ ತಂತ್ರಜ್ಞಾನಗಳನ್ನು ವೃದ್ಧಿಸುವುರ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕಡೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಆದರೆ ಎನ್.ಡಿ.ಎ ನೇತೃತ್ವದ ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಯನ್ನು ಕಡೆಗಣಿಸಿ ಡಿಜಿಟಲ್, ರೋಬೋಟ್ ಮತ್ತಿತರ ಆಧುನಿಕ ತಂತ್ರಜ್ಞಾನಗಳ ವೃದ್ಧಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ಮೂಲಕ ಕಳೆದ 5 ವರ್ಷಗಳ ಕಾಲ ನಮ್ಮ ದೇಶವನ್ನಾಳಿದ ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿಯತ್ತ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವಾರ್ಷಿಕ 12 ಸಾವಿರಕ್ಕೂ ಕಡಿಮೆ ವರಮಾನ ಇರುವ ರೈತರಿಗೆ ತಿಂಗಳಿಗೆ 6 ಸಾವಿರ ಮಾಶಾಸನ ನೀಡುವುದಾಗಿ ಘೋಷಿಸಿದೆ. ಇದರಿಂದ 5 ಕೋಟಿ ರೈತ ಕುಟುಂಬದ 25 ಕೋಟಿಯಷ್ಟು ನಾಗರಿಕರಿಗೆ ಲಾಭವಾಗುತ್ತದೆ. 2013ರ ಒಳಗೆ ಬಡತನ ನಿರ್ಮೂಲನೆಗಾಗಿ ಪಕ್ಷ ಯೋಜನೆಗಳನ್ನು ಸಿದ್ಧಪಡಿಸಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಈ ವರ್ಷ 165 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಬರ ಪೀಡಿತ ಪ್ರದೇಶಗಳಲ್ಲಿ ಬರಪರಿಹಾರ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರಕ್ಕೆ 949.50 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಕೇವಲ 460 ಕೋಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವ ಕರ್ನಾಟಕಕ್ಕೆ ಬಿಜೆಪಿಯ ಕೇಂದ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಕಳೆದ ಚುನಾವಣೆಯ ಸಮಯದಲ್ಲಿ ಕಳ್ಳ ಹಣವನ್ನು ತರುವುದಾಗಿ ಹೇಳಿದ್ದ ಬಿಜೆಪಿ ಮಾತಿಗೆ ತಪ್ಪಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ಬಡವರಿಗೆ, ಕೂಲಿಕಾರರಿಗೆ, ರೈತರಿಗೆ ತೊಂದರೆ ನೀಡಿದೆ ಎಂದು ಅವರು ಅಭಿಪ್ರಾಯ ಪಟ್ಟರು.ದೇಶದ ಸಾಮಾನ್ಯ ಪ್ರಜೆಯಿಂದ ಹಿಡಿದು ಪ್ರಧಾನಿ, ರಾಷ್ಟ್ರಪತಿ ಅವರಿಗೂ ತಮ್ಮ ನಾಯಕನನ್ನು ಆರಿಸುವ ಅಧಿಕಾರವನ್ನು ನಮ್ಮ ದೇಶದ ಸಂವಿಧಾನ ನಮಗೆ ನೀಡಿದೆ. ಕಳೆದ ಹಲವು ದಶಕಗಳಿಂದ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥ ಆಡಳಿತವನ್ನು ನಡೆಸಿ ದೇಶದ ಪ್ರತಿಯೊಬ್ಬ ಪ್ರಜೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದೆ. ದೇಶದ ರೈತರ, ಮಹಿಳೆಯರ, ಅಶಕ್ತರ ಮತ್ತು ಬಡವರ ಪರ ನಿಂತು ಕೆಲಸ ಮಾಡಿದೆ. ಶತಮಾನಗಳ ಇತಿಹಾಸ ಹೊಂದಿರುವ ಪಕ್ಷದ ತತ್ವ ಸಿದ್ಧಾಂತಗಳು ಮತದಾರ ಪರವಾಗಿ ಇವೆ. ಈ ಸಲ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಚುನಾವಣೆಗೆ ಸ್ಪರ್ಧಿಸಿದ್ದು, ಕ್ಷೇತ್ರದ ಮತದಾರರು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಬೆಂಬಲವನ್ನು ಮೈತ್ರಿ ಅಭ್ಯರ್ಥಿಗೂ ನೀಡಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ, ಮಹಾಂತೇಶ ಕೌಜಲಗಿ, ಪಕ್ಷದ ಮುಖಂಡ ನಿವೇದಿತಾ ಆಳ್ವಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.