SHARE

ಕಾಶೀಮ ಹಟ್ಟಿಹೊಳಿ, ಖಾನಾಪುರ

ಖಾನಾಪುರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಖಾನಾಪುರ ಭಾಗದಲ್ಲಿ ಒಂದು ಜನ ಸಂಪರ್ಕ ಸಭೆಯನ್ನು ಮಾಡದೇ, ಸಂಸದರ ನಿಧಿಗೆ ಬಂದ ಅನುದಾನ ಬಳಕೆ ಮಾಡದೇ ವಾಪಸ್ಸು ಹೋಗಿದೆ. ಜನರ ಕಷ್ಟ ಸುಖವನ್ನು ನೋಡದ ಇಂಥ ವ್ಯಕ್ತಿಗೆ ನೀವು ಮತ ಹಾಕುತ್ತೀರಾ? ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಂಧರ್ಭದಲ್ಲಿ ಖಾನಾಪುರ ಜೆಡಿಎಸ್ ಮುಖಂಡ ನಾಸೀರ ಅಣ್ಣಾ ಬಾಗವಾನ ಹೇಳಿದರು.

ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ಭಾಗದ ಗಂದಿಗವಾಡ, ಕಡತನಬಾಗೇವಾಡಿ, ಮುಗಳಿಹಾಳ, ಹಲಶಿ, ಖಾನಾಪುರ, ಕರವಿನಕೊಪ್ಪ, ಚಿಕ್ಕಮುನವಳ್ಳಿ, ಇದರ ಜೋತೆಗೆ ನಂದಗಡ, ಕಕ್ಕೇರಿ ಮತ್ತು ಪಾರಿಶ್ವಾಡ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅನಂತಕುಮಾರ್ ಖಾನಾಪುರ ಭಾಗಕ್ಕೆ ಏನಾದರೂ ಇಲ್ಲಿ ಅಭಿವೃದ್ಧಿ ಯೋಜನೆ ಕೊಟ್ಟಿದ್ದಾರಾ ಅಥವಾ ಲೋಕಸಭೆಯ ಸದನದಲ್ಲಿ ಈ ಭಾಗದ ಸಮಸ್ಯೆ ಕುರಿತು ಏನಾದರೂ ಚರ್ಚೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಈ ಭಾಗದಲ್ಲಿ ಮಹದಾಯಿ ಹೋರಾಟ ನಡೆದಾಗ ನಿಮ್ಮ ಪರ ದ್ವನಿ ಯಾಗಿದ್ದನಾ? ಶಿವಾಜಿ ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡುವ, ಜೈನ ಧರ್ಮದ ಗುರುಗಳ ಬಗ್ಗೆ ಹಗುರವಾಗಿ ಹೇಳಿಕೆ ನೀಡುವ ವ್ಯಕ್ತಿಗೆ ಮತ ಹಾಕುತ್ತೀರಾ? ಎಂದು ಜನರನ್ನು ಪ್ರಶ್ನಿಸಿದರು. ನಮ್ಮ ಖಾನಾಪುರ ಭಾಗದ ಜನರ ಮುಖ ಅನಂತಕುಮಾರ ನೊಡಿಲ್ಲ. ಇಲ್ಲಿಯ ಜನರ ಸಮಸ್ಯೆಯನ್ನು ಆಲಿಸಲ್ಲಿಲ್ಲ. ನಾವು ಕೆಲಸ ಮಾಡುವ ಅಭಿವೃದ್ಧಿ ಮಾಡುವ ಜನರಿಗೆ ಮತ ಹಾಕಬೇಕು. ಅದನ್ನು ಬಿಟ್ಟು ಮೋದಿ ನೋಡಿ ಅನಂತಕುಮಾರನಿಗೆ ಮತ ಹಾಕಬೇಡಿ ಎಂದು ಜನರಿಗೆ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೇಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.