SHARE

ಬೆಳಗಾವಿ: ಬೆಳಗಾವಿ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಕ್ಕೆ ಎರಡನೇ ಹಂತದ ಮತದಾನ ಬೆಳಗ್ಗೆಯಿಂದಲೇ ತುರುಸಿನಿಂದ ಪ್ರಾರಂಭವಾಗಿದ್ದು, ಬೆಳಗಾವಿ ಲೋಕಸಭಾ ಅಭ್ಯರ್ಥಿ ಸುರೇಶ ಅಂಗಡಿ ಕುಟುಂಬ ಸಮೇತ ವಿಶ್ವೇಶ್ವರಯ್ಯ ನಗರದ ಕನ್ನಡ ಶಾಲೆಯಲ್ಲಿ ಮತ ಚಲಾಯಿಸಿದರು. ತನ್ನದೇ ಗೆಲುವು ನಿಶ್ಚಿತ ಎಂದು ಬೀಗಿದ ಸುರೇಶ ಅಂಗಡಿ ಮಂದಹಾಸ ಬೀರಿದರು.

ಕಾಂಗ್ರೆಸ್ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಜಯ ನಗರದ ಸರಕಾರಿ ಕನ್ನಡ ಶಾಲೆಯಲ್ಲಿ ತಮ್ಮ ತಾಯಿ, ಸಹೋದರ ಹಾಗೂ ಪುತ್ರನೊಂದಿಗೆ ಮತ ಚಲಾಯಿಸಿದರು.

ಶಾಸಕ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಶಾಸ್ತ್ರಿ ನಗರ ಹಾಗೂ ಮಹಾಂತೇಷ ನಗರದಲ್ಲಿ ಕುಟುಂಬ ಸಹಿತ ಮತ ಚಲಾಯಿಸಿ ಬಿಜೆಪಿ ಗೆಲುವಿನ ನಗೆ ಬೀರಿದರು. ಬಿಸಿಲಿನ ಝಳ ಏರುವ ಮುನ್ನವೇ ಬೆಳಗಾವಿ ನಗರದ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ಮತದಾನ ಮಾಡಿದರು. ಬೆಳಗಿನ 11ರ ವೇಳೆಗೆ ಶೇ. 13 ರಷ್ಟು ಮತದಾನ ದಾಖಲಾಗಿದೆ. ಮತದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿರುವ ಭಾಸ ಮೂಡಿಸಿತು. ಮಹಿಳೆಯರಿಗೆ ವಿಶೇಷವಾಗಿ ಪಿಂಕ್ ಬೂತಗಳು ಗಮನ ಸೆಳೆದವು. ಮತದಾರರಿಗೆ ವ್ಹೀಲ್ ಚೇರ್, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು.