SHARE

ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿ ಆಗಬೇಕಾದರೆ ‘ನಶಾ ದುನಿಯಾ’ ಬಂದ್ ಆಗಬೇಕು, ಭಿಕ್ಷಾಟನೆ ನಿಲ್ಲಬೇಕು, ಆರ್ಥಿಕ ಕಾರಣಕ್ಕೆ ಶಿಕ್ಷಣ ವಂಚಿತರಾಗಬಾರದು, ತಡರಾತ್ರಿ ನಾಗರಿಕರು ಭಯಮುಕ್ತರಾಗಿ ತಿರುಗಾಡಬೇಕು ಎಂದು ಶಾಸಕ ಅನಿಲ ಬೆನಕೆ ಆಶಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಚರಸ್, ಗಾಂಜಾದಂತಹ ಮಾದಕ ವಸ್ತುಗಳ ಬಳಕೆ ಎಗ್ಗಿಲ್ಲದೇ ನಡೆದಿದೆ. ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೊಲೀಸ್ ಇಲಾಖೆಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು. ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದ ಕೂಡಲೆ ನಗರ ಪೊಲೀಸ್ ಇಲಾಖೆಯ ಆಯುಕ್ತರೊಂದಿಗೆ ಚರ್ಚೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳು ಮಾರಾಟವಾಗಬಾರದು ಎಂದು ಅವರು ಒತ್ತಾಯಿಸಿದರು.

ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ನಗರದಲ್ಲಿ ಭಿಕ್ಷಾಟನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಬೆಳಗಾವಿ ನಗರ ಸ್ಮಾರ್ಟ್ ಸಿಟಿಯಾಗುತ್ತಿದೆ. ರಸ್ತೆ, ಗಟಾರು ನಿರ್ಮಾಣದ ಜೊತೆಗೆ ಇಂತಹ ಸಾಮಾಜಿಕ ಸಮಸ್ಯೆಗಳೂ ದೂರಾಗಬೇಕು ಎಂದರು.