SHARE

ಬೆಳಗಾವಿ/ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಮಹಿಳೆಯ ಬರ್ಬರ ಹತ್ಯೆ ನಡೆದಿದೆ. ಕಾಂಗ್ರೆಸ್ ಮಹಿಳಾ ಮುಖಂಡೆ ರೇಷ್ಮಾ ಪಡೆಕನೂರ್ ಅವರನ್ನು ದುಷ್ಮರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ಕೋಲಾರ ಬ್ರೀಡ್ಜ್‌ ಕೆಳಗೆ ಶವ ಪತ್ತೆಯಾಗಿದೆ. ಹಳದಿ ಬಣ್ಣದ ನೈಟಿ ಧರಿಸಿದ್ದು, ಮುಖದ ಬಲಭಾಗ ಹಾಗೂ ಕೈಗೆ ಗಾಯಗಳಾಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇಬ್ಬರು ಮಕ್ಕಳ ತಾಯಿಯಾಗಿರುವ ರೇಷ್ಮಾ ಪಡೆಕನೂರ್ ಹೀಗೆ ಕೊಲೆಯಾಗಿರೋದು ಕಾಂಗ್ರೆಸ್‌ ಪಾಳಯದಲ್ಲಿ ಧಿಗ್ಬ್ರಮೆ ಮೂಡಿಸಿದೆ. ರೇಷ್ಮಾ ಹತ್ಯೆ ಬೆನ್ನಲ್ಲೆ ಹಲವು ಅನುಮಾನಗಳು ಕಾಡಲಾರಂಭಿಸಿದೆ. ನಿನ್ನೆ ತಡ ರಾತ್ರಿ ರೇಷ್ಮಾ ಪಡೆಕನೂರ್‌ ಮಹಾರಾಷ್ಟ್ರದ ಸೊಲ್ಲಾಪೂರ ಜಿಲ್ಲೆಯ ಎಂಐಎಂ ಮುಖಂಡ ತೌಫಿಕ್‌ ಪೈಲವಾನ್‌ ಜೊತೆಗೆ ಇನ್ನೋವಾ ಕಾರಿನಲ್ಲಿ ತೆರಳಿದ್ದಳು ಎನ್ನಲಾಗಿದೆ. ಆದಾದ ಬಳಿಕ ಶವವಾಗಿ ಪತ್ತೆಯಾಗಿದ್ದು, ತೌಫೀಕ್ ಹಾಗೂ ಆತನ ಸಂಗಡಿಗರು ಕೊಲೆ ಮಾಡಿದ್ದಾರೆ ಎಂದು ಮೃತ ರೇಷ್ಮಾ ಪಡೆಕನೂರ ಪತಿ ಬಂದೇನವಾಜ್ ಪಡೆಕನೂರ್ ಹಾಗೂ ಸಂಬಂಧಿಗಳು ಆರೋಪಿಸಿದ್ದಾರೆ.

ಈ ಹಿಂದೆ ಜೆಡಿಎಸ್ ಜಿಲ್ಲಾಧ್ಯಕ್ಷೆಯಾಗಿದ್ದ ರೇಶ್ಮಾ ಪಡೆಕನೂರ ಕಳೆದ 2013ರಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ ಮಾಡಿ ಸೋತಿದ್ದರು. 2018ರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಟಿಕೆಟ್ ದೊರೆಯದ ಕಾರಣ ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷದಲ್ಲಿ ರೇಷ್ಮಾ ಪಡೆಕನೂರ್ ಪ್ರಬಲರಾಗಿದ್ದರು. ಇದೀಗ ಏಕಾಏಕಿ ಕೊಲೆಯಾಗಿರೋದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ಸೈಟ್‌ ಹಣದ ವಿಚಾರವಾಗಿ ರೇಶ್ಮಾ ಪಡೇಕನೂರ, ಆಕೆಯ ಪತಿ ಸೇರಿ ರಿವಾಲ್ವರ್ ತೋರಿಸಿ 50 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಮಹಾರಾಷ್ಡ್ರದ ಸೋಲಾಪುರ ನಗರದ ಪೊಲೀಸ್ ಠಾಣೆಯಲ್ಲಿ ತೌಫಿಕ್ ದಂಪತಿಯಿಂದ ದೂರು ದಾಖಲು ದಾಖಲಿಸಿದ್ದರು. ಇದಕ್ಕೂ ಮೊದಲು 2012 ರಲ್ಲಿಯೂ ತೌಫಿಕ್‌ ಪತ್ನಿ ತನ್ನ ಗಂಡನ ಜೊತೆಗೆ ರೇಷ್ಮಾ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ವಿಜಯಪುರಕ್ಕೆ ತಮ್ಮ ಬೆಂಬಲಿಗರೊಂದಿಗೆ ಬಂದು ರೇಷ್ಮಾ ಮನೆಗೆ ಹೋಗಿ ಗಲಾಟೆ ಮಾಡಿದ್ದಳು. ಈ ವೇಳೆ ವಿಜಯಪುರದ ಜಲನಗರ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಗಲಾಟೆಯನ್ನ ಬಗೆ ಹರಿಸಲಾಗಿತ್ತು. ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ರೇಶ್ಮಾ ಪಡೇಕನೂರ ಮನೆಯಿಂದ ಹೊರ ಹೋಗಿದ್ದು, ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ. ಸದ್ಯ ಅಷ್ಟ ತಡರಾತ್ರಿಯಲ್ಲಿ ರೇಷ್ಮಾ ತೌಫಿಕ್ ಪೈಲ್ವಾನ್ ವಾಹನದಲ್ಲಿ ತೆರಳಿದ್ದು ಎಲ್ಲಿಗೆ? ಮತ್ತು ಯಾಕೆ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಮತ್ತೊಂದೆಡೆ ತೌಫಿಕ್ ನೇ ಹೊತ್ತೊಯ್ದು ಕೊಲೆ ಮಾಡಿ ಬಿಸಾಕಿದನಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿದೆ, ಪೊಲೀಸರ ತನಿಖೆ ಬಳಿಕವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.