SHARE

ಬೆಳಗಾವಿ: ನಿವೇಶನ ಕೊಡಿಸುವ ಭರವಸೆ ನೀಡಿ ₹2 ಲಕ್ಷ ಪಡೆದು ಗ್ರಾಹಕನಿಗೆ ವಂಚಿಸಿದ ಆರೋಪದ ಮೇರೆಗೆ ಜಿಪಂ. ಅಧ್ಯಕ್ಷೆ ಆಶಾ ಐಹೊಳೆ ಪತಿ ಪ್ರಶಾಂತ ಐಹೊಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವರದಿಯಾಗಿದೆ.

ಅಥಣಿ ನಗರದ ಸಂಜಯ ಸಂಕಪಾಲರ ಎಂಬುವವರು ನೀಡಿದ ದೂರಿನ ಅನ್ವಯ ಪ್ರಶಾಂತ ಐಹೊಳೆ ವಿರುದ್ದ ಐಪಿಸಿ 406, 420 ಮತ್ತು 506 ಕಲಂ ನಡಿ ಅಥಣಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತ ಪ್ರಶಾಂತ ಮಹಾಲಕ್ಷ್ಮೀ ಎಸ್ಟೇಟ್ ಹೆಸರಿನಲ್ಲಿ ನಿವೇಶನ ಕೊಡುವುದಾಗಿ ಹೇಳಿ ಎರಡು ಲಕ್ಷ ರೂ. ಪಡೆದುಕೊಂಡಿದ್ದ, ಆದರೆ ನಿವೇಶನ ಕೊಡಿಸದೆ ನಮಗೆ ಮೋಸ ಮಾಡಿದ್ದಾನೆ ಎಂದು ಸಂಜಯ ದೂರಿನಲ್ಲಿ ತಿಳಿಸಿದ್ದಾರೆ. ಅಥಣಿ ಪೊಲೀಸರು ದಾಖಲೆಗಳ ಆಧಾರದ ಮೇಲೆ ಪ್ರಶಾಂತ ಐಹೊಳೆಯವರನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಥಣಿಯಲ್ಲಿ ಮಹಾಲಕ್ಷ್ಮೀ ಟ್ರೇಡ್ ಡಿಸ್ಟ್ರಿಬ್ಯುಷನ್ ಪ್ರೈ.ಲಿ ಎಂಬ ಕಂಪನಿ ಹೆಸರಿನಲ್ಲಿ ಠೇವಣಿ ಇಟ್ಟುಕೊಂಡು ವಾಪಸ್ಸು ನೀಡದೆ ವಂಚಿಸಿರುವ ಬಗ್ಗೆ ಮೇ.6 ರಂದು ಪ್ರಶಾಂತ ಐಹೊಳೆ ಹಾಗೂ ಜಿಪಂ‌ ಅಧ್ಯಕ್ಷೆ ಆಶಾ ಐಹೊಳೆಯವರ ಮೇಲೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 2011ರಲ್ಲಿ ₹50 ಸಾವಿರ ಠೇವಣಿ ಇಟ್ಟುಕೊಂಡು ನಂತರ ಆ ಮೊತ್ತವನ್ನು ವಾಪಸ್ಸು ನೀಡದೆ ಠೇವಣಿದಾರರು ವಂಚಿಸಿದ ಬಗ್ಗೆ ದೂರು ನೀಡಿದ್ದರು.