SHARE

By: G. Purushotham

ಬೆಳಗಾವಿ: ನಗರದ ರೇಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ತೀವ್ರ ತಲೆಕೆಡಿಸಿಕೊಂಡಿದ್ದ, ಸಂಸದ ಸುರೇಶ ಅಂಗಡಿ ಈಗ ಚಿಕುಬುಕು ರೈಲು ಏರುವಂತಾಗಿದೆ. ದಕ್ಷಿಣೋತ್ತರವಾಗಿ ನಗರ ಸಂಪರ್ಕಿಸುವ ನಿಟ್ಟಿನಲ್ಲಿ ರೈಲ್ವೇ ಓವರಬ್ರಿಡ್ಜಗಳ ನಿರ್ಮಾಣ ಕಾಲ ಮಿತಿಯಲ್ಲಿ ಮಾಡಿಸುವ ದಿಸೆಯಲ್ಲಿ ದಿನಂಪ್ರತಿ ಪರಿಶೀಲಿಸುತ್ತಿದ್ದ ಸುರೇಶ ಅಂಗಡಿ ಅವರನ್ನು ರೈಲ್ವೇ ಮೇಲ್ಸೇತುವೆಗಳು ‘ಕೈ’ ಬಿಡದೇ ತಮ್ಮ ಇಲಾಖೆಗೆ ಸೇರಿಸಿಕೊಂಡಿವೆ.ಗೋಗಟೆ ಸರ್ಕಲ್, ಹಳೆ ಪಿಬಿ ರಸ್ತೆ, ಕಪಿಲೇಶ್ವರ ಬ್ರಿಡ್ಜಗಳ ನಿರ್ಮಾಣಕ್ಕೆ ತಮ್ಮ ಮೂರನೇ ಸಂಸದ ಅವಧಿಯಲ್ಲಿ ಬೆಂಬಿಡದೇ ಪ್ರಯತ್ನಿಸಿದ್ದರ ಫಲ ಅವರಿಗರಿವಿಲ್ಲದೆಯೇ ಅದೇ ಇಲಾಖೆ ನಡೆಸುವಂತೆ ಇಂದು ಮಾಡಿದೆ.ಅಂದಿನ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ರೈಲ್ವೇಗೆ ಸಂಬಂಧಿಸಿದ ಸುಧಾರಣೆಗಳ ಹತ್ತು ಹಲವು ಕನಸು ಬಿಚ್ಚಿಟ್ಟಿದ್ದ ಸುರೇಶ ಅಂಗಡಿ ಅವರಿಗೆ ಪಿಯೂಷ್ ಗೋಯಲ್ ಅವರೊಂದಿಗೇನೆ ರೈಲ್ವೇ ಇಲಾಖೆ ನಡೆಸುವ ಜವಾಬ್ದಾರಿ ಒದಗಿ ಬಂದಿದೆ. ಮಹಾತ್ಮಾ ಗಾಂಧಿಜೀ ಅಂದು ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ ಸಂಸ್ಮರಣೆಗಾಗಿ ರೈಲು ನಿಲ್ದಾಣವನ್ನು ‘ಸಾಬರಮತಿ ಆಶ್ರಮದ ಮಾದರಿ’ ರೂಪಿಸುವ, ‘ರಾಣಿ ಚನ್ನಮ್ಮ ರೈಲು ನಿಲ್ದಾಣ’ ಎಂದು ನಾಮಕರಣ ಮಾಡುವ, ಅತ್ಯಾಧುನಿಕತೆ ಟಚ್ ನೀಡುವ, ರೈಲ್ವೇ ಗೂಡ್ಸಶೆಡನ್ನು ಸ್ಥಳಾಂತರಿಸುವ, ಜಿಲ್ಲೆಯ ತರಕಾರಿ ಮತ್ತು ಕೈಗಾರಿಕಾ ಗೂಡ್ಸ್ ವ್ಯವಸ್ಥಿತ ಸಾಗಾಣಿಕೆ, via ಕಿತ್ತೂರು ಮಾರ್ಗವಾಗಿ ಹುಬ್ಬಳ್ಳಿ ಧಾರವಾಡ ರೈಲು ಸಂಪರ್ಕ ಸೇರಿಸುವ ಎಂದೆಂದಿನ ಹತ್ತು ಹಲವು ಕೆಲಸಗಳತ್ತ ಅಂಗಡಿ ಈಗ ಚಿತ್ತ ಹರಿಸಿದ್ದು ತಮ್ಮ ಆಪ್ತರ ಬಳಿ ಬಿಚ್ಚಿಟ್ಟಿದ್ದಾರೆ.ಘಟಪ್ರಭಾ ರೈಲು ನಿಲ್ದಾಣ ಅತ್ಯಾಧುನಿಕ ಅಭಿವೃದ್ದಿಗೆ ಪೂಜೆ ಸಲ್ಲಿಸಿದ್ದ ಸುರೇಶ ಅಂಗಡಿ ಈಗ ಮಂತ್ರಿಯಾಗಿ ಪರಿವೀಕ್ಷಿಸುವ ಸಮಯ ಬಂದೊದಗಿದೆ. ಸಮಯ ವ್ಯರ್ಥ ಮಾಡದೇ, ಅಪೇಕ್ಷೇಗಿಂತ ಹೆಚ್ಚಿನ ಕೆಲಸ ಮಾಡಿ ತೋರಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನಕ್ಕಿಂತ ಮೊದಲು ನೀಡಿರುವ ಸೂಚನೆಗೆ ಸಂಸದ ಸುರೇಶ ಅಂಗಡಿ ಬದ್ಧರಾಗಿರುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ಅದೃಷ್ಟ ನಾಲ್ಕನೇ ಭಾರಿ ಕೈ ಹಿಡಿದರೆ ಸುರೇಶ ಅಂಗಡಿ ಸಚಿವ ಎಂಬ ಊಹೆ ನಿಜವಾಗಿದ್ದು, ಕೇಂದ್ರದಲ್ಲಿ …ಒನ್ ವೇ ಸರಕಾರ… ಬಂದಿರುವುದರಿಂದ ಸುರೇಶ ಅಂಗಡಿ ಅವರ ಮೇಲೆ ರೈಲ್ವೇ ಯೋಜನೆಗಳ ಯಶಸ್ವಿ ಜಾರಿ ಮತ್ತು ಸುಧಾರಣೆಯ ಆಶಯ ಜನರಲ್ಲಿ ಮೂಡಿದೆ.ತಮ್ಮ ಹುಟ್ಟುಹಬ್ಬದ ದಿನ ಜೂ. 1ರಂದು ಇಂದು ‘ರೈಲು ಏರಿ’ ಬೆಳಗಾವಿಗೆ ಇಂದು ಸುರೇಶ ಅಂಗಡಿ ಮಧ್ಯಾಹ್ನ ಆಗಮಿಸುತ್ತಿದ್ದು, ಭಾರಿ ಕರಡತಾಣದ ಮಧ್ಯೆ ಸ್ವಾಗತಿಸಲು ಬಿಜೆಪಿ ಮತ್ತು ಸಾರ್ವಜನಿಕರು ಸಜ್ಜಾಗಿದ್ದಾರೆ. ತಮ್ಮ ನಿರ್ಮಾಣಕ್ಕೆ ಕಾರಣನಾದ, ಇಂದು ತಮ್ಮ ಮಾಲೀಕನಾಗಿರುವ ಸಂಸದ ಸುರೇಶ ಅಂಗಡಿಗೆ, ನಗರದ ನೂತನ ಬ್ರಿಡ್ಜಗಳ ಮೂಕ ಸ್ವಾಗತವೂ ಸಿಕ್ಕಿದ್ದು ನಿಜ. ಹಿಂದೆಮುಂದೆ ಮೂಗು ಮುರಿದವರ ಮೂಗು ಹಿಂಡಿ ಎತ್ತರಕ್ಕೇರಿದ ಸುರೇಶ ಅಂಗಡಿ ಹಿಂದೆ, ದೇಶಾದ್ಯಂತ ಎಡೆಬಿಡದೇ ಸಂಚರಿಸಿ ಇಲಾಖೆ ಬಲಪಡಿಸುವ ಬಲು ದೊಡ್ಡ ಜವಾಬ್ದಾರಿ ಇದೆ.