SHARE

ಬೆಳಗಾವಿ: ನಗರದ ಕೋಟೆ ಕೆರೆಯ ಆವರಣದ ಪ್ರವೇಶಕ್ಕೆ ಶುಲ್ಕ ವಿಧಿಸಿರುವ ಹಿಂದಿನ ಜಿಲ್ಲಾಧಿಕಾರಿ ಡಾ. ವಿಶಾಲ ಅವರ ನಿರ್ಧಾರವನ್ನು ಸಕಾರಾತ್ಮಕವಾಗಿ ಮರು ಪರಿಶೀಲಿಸಲಾಗುವದೆಂದು ಪ್ರಾದೇಶಿಕ ಆಯುಕ್ತರಾದ ಶ್ರೀ ಪಿ. ಎ. ಮೇಘಣ್ಣವರ ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ಎಸ್.ಬಿ. ಬೊಮ್ಮನಹಳ್ಳಿ ಅವರು ಇಂದು ಕನ್ನಡಪರ ಹಾಗೂ ಇತರ ಸಂಘಟನೆಗಳ ಮುಖ್ಯಸ್ಥರಿಗೆ ಭರವಸೆ ನೀಡಿದ್ದಾರೆ.

ಇಂದು ಶುಕ್ರವಾರ ಮುಂಜಾನೆ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರವೇಶ ಶುಲ್ಕ ಹೇರಿಕೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದ ನಂತರ ಉಭಯ ಹಿರಿಯ ಅಧಿಕಾರಿಗಳು ಸಂಘಟನೆಗಳ ಮುಖ್ಯಸ್ಥರಿಗೆ ಈ ಭರವಸೆ ಕೊಟ್ಟಿದ್ದಾರೆ. ಪ್ರವೇಶ ಶುಲ್ಕ ವಿಧಿಸಿ ಹಿಂದಿನ ಜಿಲ್ಲಾಧಿಕಾರಿಗಳು ನಿರ್ಧಾರ ಕೈಕೊಳ್ಳುವ ಮೊದಲು ಪರಿಶೀಲಿಸಿದ ಅಂಶಗಳನ್ನು ಮರು ಪರಿಶೀಲಿಸಿ ಸಕಾರಾತ್ಮಕ ನಿರ್ಣಯ ಕೈಕೊಳ್ಳಲು ತಾವು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾಗಿ ಶ್ರೀ ಮೇಘಣ್ಣವರ ಅವರು ಸಭೆಗೆ ತಿಳಿಸಿದರು. ಮರು ಪರಿಶೀಲನೆ ನಿರ್ಧಾರ ಕೈಕೊಳ್ಳುವ ಮೊದಲು ತಾವು ಈ ಸಂಬಂಧದ ಕಡತದಲ್ಲಿಯ ಅಂಶಗಳನ್ನು ಪರಿಶೀಲಿಸುವದಾಗಿ ಶ್ರೀ ಬೊಮ್ಮನ್ನಹಳ್ಳಿ ಅವರು ಭರವಸೆ ನೀಡಿದರು.

ಆರಂಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು, ಹಿಂದಿನ ಜಿಲ್ಲಾಧಿಕಾರಿಗಳು ತಪ್ಪು ತಿಳುವಳಿಕೆಯಿಂದಾಗಿ ಹಾಗೂ ವಾಸ್ತವತೆಯ ಅರಿವಿನ ಅಭಾವದಿಂದಾಗಿ ಕೈಕೊಂಡಿರಬಹುದಾದ ಈ ನಿರ್ಧಾರದಿಂದಾಗಿ ಕೋಟೆ ಕೆರೆಯ ಆವರಣದಲ್ಲಿ ನಿತ್ಯ ವಾಯುವಿಹಾರ ಮಾಡುವ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಮಹಿಳೆಯರು ಮತ್ತು ಮಕ್ಕಳಂತೂ ಈಗ ಕೋಟೆ ಕೆರೆಯ ಸಮೀಪವೂ ಹಾಯುತ್ತಿಲ್ಲ. ಕೆರೆಯ ಆವರಣ ಬಿಕೋ ಎನ್ನುತ್ತಿದೆ. ಈ ನಿರ್ಧಾರವನ್ನು ತಾವಿಬ್ಬರೂ ಹಿರಿಯ ಅಧಿಕಾರಿಗಳು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರಲ್ಲದೇ, 1991 ರಲ್ಲಿ ಅಂದಿನ ಜಿ.ಪ. ಮುಖ್ಯ ಕಾರ್ಯದರ್ಶಿ ಶ್ರೀ ಭರತಲಾಲ ಮೀನಾ ಸ್ಥಾಪಿಸಿದ್ದ ಅಪ್ನಾ ದೇಶ ಸಂಸ್ಥೆಯೊಂದಿಗೆ ಬೆಳಗಾವಿಯ 60 ಕ್ಕೂ ಅಧಿಕ ಸಂಘಟನೆಗಳ ಸಾವಿರಾರು ಯುವಕರು ಕೈಗೂಡಿಸಿ ಶ್ರಮದಾನ ಮಾಡುವ ಮೂಲಕ ಕೆರೆಗೆ ಒಂದು ರೂಪ ಕೊಟ್ಟಿದ್ದನ್ನು ವಿವರಿಸಿದರು.

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಶ್ರೀ ಬಿ. ತಿಪ್ಪೇಸ್ವಾಮಿ ಅವರು ಮಾತನಾಡಿ ಜನರ ಅಭಿಪ್ರಾಯವನ್ನು ಕೇಳದೆ ಏಕಪಕ್ಷಿಯವಾಗಿ ಕೈಕೊಂಡ ಶುಲ್ಕ ಹೇರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಕೋರಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀ ಮಹಾದೇವ ತಳವಾರ, ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಮ ಖತೀಬ, ಎಂ.ಜಿ. ಮಕಾನದಾರ, ಶಿವಪ್ಪ ಶಮರಂತ, ರಾಜು ಕುಸೋಜಿ, ಸಾಗರ ಬೊರಗಲ್ಲ, ಬಾಬು ಸಂಗೋಡಿ, ಎಂ.ಕೆ. ಕುಂದರಗಿ, ರಜತ ಅಂಕಲೆ ಮುಂತಾದವರು ಶುಲ್ಕ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದರು.