SHARE

ಬೆಳಗಾವಿ: ಕೇಂದ್ರದ ಮಾರ್ಗದರ್ಶಿಯಂತೆ ನಡೆಯುವ ಸ್ಮಾರ್ಟ್ ಸಿಟಿ ಕೆಲಸ ಇನ್ಮುಂದೆ ಬಹುವೇಗ ಪಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ. ಇಂದು ಸ್ಮಾರ್ಟ್ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಅವರು ಮಾಧ್ಯಮಗಳು ಎತ್ತಿದ ಹಲವಾರು ಪ್ರಶ್ನೆಗಳಿಗೆ ನಿರುತ್ತರರಾಗಿ ಪತ್ರಕರ್ತರ ಆಕ್ರೋಶಕ್ಕೆ ಕಾರಣರಾದರು. ಬೆಳಗಾವಿ ನಗರದಲ್ಲಿ ನಿರಂತರ ನೀರು(24×7)ಯೋಜನೆಗೆ ಟೆಂಡರ್ ಬಾಕಿ ಇದ್ದು ಜುಲೈ 31ರೊಳಗೆ ₹420 ಕೋಟಿಯಲ್ಲಿ ಕೆಲಸ ನಡೆಯಲಿದೆ ಎಂದರು. ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ₹120 ಕೋಟಿ ಬೆಳಗಾವಿಗೆ ಕೊಡಲಾಗುತ್ತಿದೆ ಎಂದರು.

ಸಚಿವ ಮೌನ: ಬೇಸಮೆಂಟ್ ತೆರವು, ₹100 ಬಾಂಡನ ಅಕ್ರಮ ಸೈಟ್ ಮತ್ತು ಲೇಔಟಗಳು, ಭುಜಬಲ ಪರಾಕ್ರಮಿಗಳ ಅತಿಕ್ರಮಣ, ಬೇಕಾಬಿಟ್ಟಿ ಕಾನೂನು ಬಾಹಿರ ಬೆಳೆದ ಕಟ್ಟಡಗಳು, ಅಕ್ರಮಗಳಿಗೆ ಅಧಿಕಾರಿ ವ್ಯವಸ್ಥೆಯ ಸಾಥ್, ಥರ್ಡ್ ಪಾರ್ಟಿ ಇನ್ಸಪೆಕ್ಷನ್ ಎಂಬ ಭ್ರಷ್ಟಾಚಾರಿಗಳ ಅಕ್ರಮ ಕೂಟ, ಸಬ್ ಕಂಟ್ರಾಕ್ಟರ್ ಕಳಪೆ ಕಾಮಗಾರಿ ಹಾವಳಿ ಹತ್ತಾರು ವಿಷಯಗಳ ಬಗೆಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಸಚಿವ ಖಾದರ್ ಏನೂ ಉತ್ತರಿಸಲಾಗದೇ ಚರ್ಚೆ…ಚರ್ಚೆ…ಚರ್ಚೆ ಎಂಬ ಶಬ್ದ ಉಸುರಿ ಚರ್ಚೆ ಮಾಡುವೆ ಎಂಬ ಉದ್ಘಾರ ರಾಗ ತೆಗೆದರು‌.

ಪೊಲೀಸ್ ಪಬ್ಲಿಕ್ ಕ್ಲ್ಯಾಶ್: ಆಗದ ಬೇಸಮೆಂಟ್ ತೆರವು, ಅತಿಕ್ರಮಣ ಬಿಡಿಸದ್ದರಿಂದ ಪಾರ್ಕಿಂಗ್ ಅವ್ಯವಸ್ಥೆ ಆಗಿದೆ. ಬೆಳಗಾವಿ ಮಾರುಕಟ್ಟೆ ಬಿದ್ದು ಹೋಗಿದೆ. ಪೊಲೀಸರ ಕಿರಿಕಿರಿಯಿಂದ ಜನ ಬೇಸತ್ತಿದ್ದು, ಪಬ್ಲಿಕ್ ಮತ್ತು ಪೊಲೀಸ್ ಉಧ್ಭನ ಆಗುವುದು ಸನ್ನಿಹಿತವಾಗಿದೆ ಎಂದಾಗ ಸಚಿವರು ಮೌನಕ್ಕೆ ಶರಣಾದರು.

ಸ್ಮಾರ್ಟ್ ಸಿಟಿ ₹54ಕೋಟಿ ಬಡ್ಡಿ: ಸ್ಮಾರ್ಟ್ ಸಿಟಿಗೆ ಒಟ್ಟು ₹995 ಕೋಟಿ ಹಣ ಬಂದಿದ್ದು, ಅದರಲ್ಲಿ ₹560 ಕೋಟಿಯಷ್ಟು ಹಣದ ಕೆಲಸ ನಡೆಯುತ್ತಿದೆ. ಸ್ಮಾರ್ಟ್ ಸಿಟಿಯ ಒಟ್ಟು ಹಣಕ್ಕೆ ಬಡ್ಡಿ ₹54ಕೋಟಿ ಬಂದಿದ್ದು, ಅದರಲ್ಲಿ 4ಕೋಟಿ ಇಲ್ಲಿಯವರೆಗೆ ಖರ್ಚಾಗಿದೆ ಎಂದರು. ಸ್ಮಾರ್ಟ್ ಜೊತೆಗೆ ಸೇಫ್ಟಿ ಸಿಟಿಗೆ ಆದ್ಯತೆ ನೀಡಲಾಗಿದೆ, ಕಾನೂನುಬಾಹೀರ ಲೇಔಟಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದ ಅವರು ಬೆಳಗಾವಿ ನಗರಾಭಿವೃದ್ಧಿ ಆಡಳಿತದ ಆಟಾಟೋಪಗಳ ಅನಾವರಣ ಮಾಡಿಕೊಂಡರು. ಯಾವ ಸಮಸ್ಯೆಗೂ ನಿಶ್ಚಿತ ಉತ್ತರ ಕೊಡದ ಸಚಿವ ಚರ್ಚೆ- ಚರ್ಚೆ- ಚರ್ಚೆ ಎನ್ನುತ್ತ ಮಹಾನಗರ ಪಾಲಿಕೆಯತ್ತ ಚರ್ಚೆಗೆ ತೆರಳಿದರು.