SHARE

ಬೆಳಗಾವಿ: ಶಿವು ಉಪ್ಪಾರ ಪ್ರಕರಣದ ತನಿಖಾ ವರದಿ ಬಹಿರಂಗಪಡಿಸಬೇಕೆಂದು ಶ್ರೀರಾಮಸೇನಾ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮಠಾಧೀಶರು ಹಾಗೂ ರಾಜ್ಯದಾದ್ಯಂತದಿಂದ ಆಗಮಿಸಿದ್ದ ಹಿಂದೂಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪೊಲೀಸರು ತಾವೇ ಬರೆದ ಪತ್ರಕ್ಕೆ ದಿ. ಶಿವು ಅವರ ತಂದೆತಾಯಿಯ ಸಹಿ ಪಡೆದು ಆತ್ಮಹತ್ಯೆಯೆಂದು ಅವರನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆರೋಪಿಸಿದರು. ಎರಡನೇ ಬಾರಿ ಶಿವು ತಾಯಿ ಪೊಲೀಸರಿಗೆ ದೂರು ನೀಡಿದ್ದು ಎರಡನೇಯ ಅರ್ಜಿ ವಿಚಾರಣೆ ಪೊಲೀಸರು ಮಾಡುತ್ತಿಲ್ಲ. ಕೂಡಲೇ ಅರ್ಜಿ ವಿಚಾರಣೆ ಹಾಗೂ ಅವನಿಗೆ ಬಂದ ಬೆದರಿಕೆಗಳ ಬಗೆಗೆ ತನಿಖೆ ಆಗದಿದ್ದರೆ ಸದ್ಯದಲ್ಲೇ ಬೆಳಗಾವಿ ಬಂದ್ ಕರೆ ಕೊಡಲಾಗುವುದು ಎಂದು ಪ್ರಮೋದ ಮುತಾಲಿಕ ಸರಕಾರಕ್ಕೆ ಎಚ್ಚರಿಕೆ ನೀಡಿದರು. ನಗರ ಪೊಲೀಸರು & ಜಿಲ್ಲಾ ಪೊಲೀಸರು ಪರಸ್ಪರರ ಮೇಲೆ ಜವಾಬ್ದಾರಿ ಎತ್ತಿ ಹಾಕಿ ಪ್ರಕರಣ‌ ಮುಚ್ಚುತ್ತಿದ್ದಾರೆ. ಮರಣದ ಪೂರ್ವ ಶಿವು ಅನುಭವಿಸಿದ್ದ ಅನ್ಯಾಯಗಳ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಲಭಿಸಿದರೂ ವಿಚಾರಣೆ ಆರಂಭಿಸ್ರ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ರಾಜಕಾರಣಿಗಳು ಈ ವಿಷಯದಲ್ಲಿ ಮೌನವಹಿಸಿದ್ದು, ಹಿಂದೂಪರ ರಾಜಕಾರಣಿಗಳು ಹಾಗೂ ಶಾಸಕ ಸಂಸದರ ವಿರುದ್ದ ಪ್ರತಿಭಟನೆ ಸಂಘಟಿಸಲಾಗುವುದು ಎಂದು ಮತಾಲಿಕ ಘೋಷಿಸಿದರು. ಯಾವುದೇ ಕಾರಣಕ್ಕೂ ಸರಕಾರ ಶಿವು ಸಾವಿನ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಇಂದಿನ ಸಮಾವೇಶ ಆಗ್ರಹಿಸಿದ್ದು, ಇಲ್ಲದಿದ್ದರೆ ಕೆಲ ದಿನಗಳಲ್ಲಿ ಬೆಳಗಾವಿ ಬಂದ್ ಕರೆ ಕೊಡುವುದಾಗಿ ಎಚ್ಚರಿಸಿದೆ. ಆಂದೋಲ ಕರಣೇಶ್ವರಮಠದ ಸಿದ್ದಲಿಂಗ ಸ್ವಾಮೀಜಿ, ಹಾವೇರಿ ಪ್ರಣವಾನಂದ ಸ್ವಾಮೀಜಿ, ಚಿತ್ರದುರ್ಗದ ಸೇವಾಲಾಲ ಸ್ವಾಮೀಜಿ, ಸದಲಗಾ ಧರೇಶ್ವರ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ಆನಂದ ಶೆಟ್ಟಿ ಆಡ್ಯಾರ, ಪರಶುರಾಮ ನಡಮನಿ, ವಿನಯ ಅಂಗ್ರೊಳ್ಳಿ ಹಾಗೂ ಮೃತನ ತಂದೆ ಬಲರಾಮ ಉಪ್ಪಾರ, ತಾಯಿ ಗಂಗಮ್ಮ ಉಪ್ಪಾರ ಸೇರಿದಂತೆ ಇತರರು ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.