ಬೆಂಗಳೂರು: ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆಯುವ ಹೇಳಿಕೆ ನೀಡಿದ ಹಿನ್ನೆಲೆ, ಅತೃಪ್ತ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ವಿಡಿಯೋವೊಂದನ್ನ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ರಾಮಲಿಂಗಾ ರೆಡ್ಡಿಯನ್ನ ಫಾಲೋ ಮಾಡಲ್ಲ ಅಂತ ಎಸ್ಟಿ ಸೋಮಶೇಖರ್ ಹಾಗೂ ಬೈರತಿ ಬಸವರಾಜು ಸ್ಪಷ್ಟಪಡಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರೋ ಎಸ್ಟಿ ಸೋಮಶೇಖರ್, ನಾವು ಮೂವರು ಹಾಗೂ ರಾಮಲಿಂಗಾ ರೆಡ್ಡಿ ಜೊತೆಯಲ್ಲಿ ಮಾತನಾಡಿ, ರಾಜೀನಾಮೆ ಕೊಟ್ಟ ನಂತರ ಯಾವುದೇ ಕಾರಣಕ್ಕೂ ವಾಪಸ್ ಪಡೀಬಾರದು ಅನ್ನೋ ಒಪ್ಪಂದದ ಮೇಲೆ ರಾಜೀನಾಮೆ ಕೊಟ್ಟಿದ್ದೇವೆ. ಅನೇಕ ಸಲ ಮಾತನಾಡುವಾಗಲೂ ರಾಜೀನಾಮೆ ವಾಪಸ್ ಪಡೆಯಲ್ಲ. ನೂರಕ್ಕೆ ನೂರು ವಿಶ್ವಾಸ ಇಡಿ ಅಂತ ರಾಮಲಿಂಗಾ ರೆಡ್ಡಿ ಹೇಳಿದ್ರು. ಆದ್ರೆ ಈಗ ವಿಶ್ವಾಸ ಮತ ಯಾಚನೆ ದಿನ, ಕಾಂಗ್ರೆಸ್ ನಾಯಕರ ಒತ್ತಾಯದಿಂದ ರಾಜೀನಾಮೆ ವಾಪಸ್ ಪಡೆಯೋದಾಗಿ ಹೇಳಿದ್ದನ್ನು ಗಮನಿಸಿದ್ದೇವೆ. ನಾವು ರಾಮಲಿಂಗಾ ರೆಡ್ಡಿಯನ್ನು ಯಾವುದೇ ಕಾರಣಕ್ಕೂ ಫಾಲೋ ಮಾಡಲ್ಲ ಅಂತ ಹೇಳಿದ್ದಾರೆ.