SHARE

ಬೆಳಗಾವಿ: ಬೆಳಗಾವಿ ನಗರದಲ್ಲಿನ ಚರಂಡಿ ಪ್ರವಾಹ ನೀರು ನಿಯಂತ್ರಣಕ್ಕೆ ಬಂದಿದೆ. ಎರಡು ದಿನಗಳಿಂದ ನಗರದ ನಾಗರಿಕರಿಗೆ ಇದ್ದ ನೀರಿನ ಪ್ರವಾಹದ ದುಗುಡವೀಗ ಶಮನವಾಗಿದೆ. ಆದರೂ ಪಾಲಿಕೆ ಸಂತ್ರಸ್ತರು ಸೇರಿದಂತೆ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕ ಜನಜೀವನ ವ್ಯವಸ್ಥೆ ಮೇಲೆ ನಿರಂತರ ಕಣ್ಣಿಟ್ಟಿದ್ದು ಅಗತ್ಯ ಸೌಲಭ್ಯಗಳಿಗೆ ಹಗಲು ರಾತ್ರಿ ಶ್ರಮಿಸುತ್ತೇನೆ. ಈ ನಿಟ್ಟಿನಲ್ಲಿ ನಮ್ಮ ಪಾಲಿಕೆಯ ಅಧಿಕಾರಿ‌ ಸಿಬ್ಬಂದಿ ವರ್ಗದವರ ಶ್ರಮವೂ ಶ್ಲಾಘನೀಯ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ಈ ಸಂಬಂಧ ಅವರು ನಗರದ ಪ್ರಮುಖ ನೀರು ಹರಿಯುವ ತಾಣ ನಾನಾವಾಡಿ ಹೆಲಿಪ್ಯಾಡದಿಂದ ಮರಾಠಾ ಕಾಲನಿ, ಟಿಳಕವಾಡಿಯ ವಿವಿಧ ಬಡಾವಣೆ, ಜಕ್ಕೇರಿ ಹೊಂಡ ಭೇಟಿ ನೀಡಿ ಅಲ್ಲಿನ ಪ್ರಸ್ತುತ ಸ್ಥಿತಿಗತಿ ಅರಿತು ಅಧಿಕಾರಿ ಹಾಗೂ ಸಿಬ್ಬಂದಿಗೆ ಅಗತ್ಯ ಮಾರ್ಗ ದರ್ಶನ ಮಾಡಿದರು.

ನಗರದಲ್ಲಿ ಮಹಾನಗರ ಪಾಲಿಕೆ ಒಟ್ಟು ೧೨ ಪರಿಹಾರ ಕೇಂದ್ರಗಳಾದ ಜಯವಂತಿ ಮಂಗಲ ಕಾರ್ಯಾಲಯ, ಧರ್ಮನಾಥ ಭವನ, ಸಾಯಿ ಭವನ, ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯ, ವೀರಭದ್ರ ದೇವಸ್ಥಾನ, ಜೈನ ಸ್ಕೂಲ, ಕೈವಲ್ಯ ಯೋಗಾಶ್ರಮ, ಅನಗೋಳ ಆಧಿನಾಥ ಭವನ, ಅಂಬೇಡ್ಕರ್ ಭವನ, ಪೀರವನವಾಡಿ ಮಂಗಲಕಾರ್ಯಾಲಯ, ಭಾಗ್ಯನಗರ ಸಿಟಿ ಹಾಲ್, ಇವುಗಳಲ್ಲಿ ಊಟ, ವಸತಿ, ವೈದ್ಯಕೀಯ ಸೇವೆ ಸೇರಿದಂತೆ ಎಲ್ಲ ಮೂಲ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸಾಯಿ ಭವನದ ಸಂತ್ರಸ್ತರನ್ನು ಮಾತಿಗೆಳೆದಾಗ, ನಮಗೆ ಈ ಪರಿಹಾರ ಕೇಂದ್ರದಲ್ಲಿ ಯಾವುದೇ ರೀತಿಯ ತೊಂದರೆ ಆಗಿಲ್ಲ. ಪಾಲಿಕೆಯವರು ಉತ್ತಮ ವೈದ್ಯಕೀಯ, ಊಟೋಪಚಾರ, ವಸತಿಗೆ ಬೇಕಾದ ಹಾಸಿಗೆ ವ್ಯವಸ್ಥೆ ಮಾಡಿದೆ ಎಂದು ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಉಳಿದ ಕೇಂದ್ರಗಳಿಗೂ ಭೇಟಿ ನೀಡಿದಾಗ ಅವರದೂ ಪಾಲಿಕೆ ಕಾಳಜಿ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತವಾಯಿತು.