SHARE

ಬೆಳಗಾವಿ: ಬೆಳಗಾವಿ, ಸಂಕೇಶ್ವರ ಪಟ್ಟಣದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು. ಇದಕ್ಕೂ ಮೊದಲು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಆಹಾರ ಧಾನ್ಯ ಅವಶ್ಯಕತೆ ಇದ್ರೆ ನಾನು ಸಹಾಯ ಮಾಡುತ್ತೇನೆ. ಸರ್ಕಾರ ಕೆಲಸ ಮಾಡುತ್ತಿದೆ,ಈಗ ನಾನು ರಾಜಕೀಯ ಬೆರಸಲ್ಲ. ಇವತ್ತು ಇರುವ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೆ ಇಂತಹ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ಸಿಎಂ ಯಡಿಯೂರಪ್ಪ ಅವರ ಮೇಲೆ ಹೊಣೆ ಇದೆ.ಅಧಿಕಾರಿಗಳ ಮುಖಾಂತರ ಕೆಲಸ ಮಾಡಿಸಿಕೊಳ್ಳಬೇಕು. ನಾನು ಹತ್ತು ಸಾವಿರ ಬೆಡ್ ಶಿಟ್ ಮಧುರೈದಿಂದ ತರಿಸಿ ಸಂತ್ರಸ್ತರಿಗೆ ಸಹಾಯ ಮಾಡುತ್ತೇನೆ ಎಂದರು.

ಸಂಕೇಶ್ವರದಲ್ಲಿ ಮಾತನಾಡಿದ ಅವರು, ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಸರ್ಕಾರದ ಮೂಲಕ ಮನೆ ಹಾಗೂ ಪರಿಹಾರವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಹಾನಿಯ ಕುರಿತು ಸಮಗ್ರ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಇನ್ನೂ ಒಂದು ತಿಂಗಳು ಕಾಲಾವಕಾಶ ಬೇಕಾಗಬಹುದು. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸಿಕೊಡಲು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದರು. ಸಂತ್ರಸ್ತರು ಧೈರ್ಯದಿಂದ ಇರಬೇಕು. ಏನಾದರೂ ಸಮಸ್ಯೆಗಳು ಇದ್ದರೆ ವೈಯಕ್ತಿಕವಾಗಿ ಸಾಧ್ಯವಾದಷ್ಟು ಪರಿಹರಿಸಲು ಸಿದ್ದ. ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.ಮಾಜಿ ಮಂತ್ರಿಗಳಾದ ಬಂಡೆಪ್ಪ ಕಾಂಶೆಂಪುರ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಶಿವನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.