SHARE

ಬೆಳಗಾವಿ: ಕರ್ನಾಟಕದಲ್ಲಿ ನೆರೆ ಪ್ರವಾಹದಿಂದಾಗಿ ಒಟ್ಟು ಹತ್ತು ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಸಾಂಬ್ರಾದಲ್ಲಿ ಕೇಂದ್ರ ಗೃಹಮಂತ್ರಿ ಅಮಿತ ಶಾ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಬಳಿಕ ತಿಳಿಸಿದರು.

ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 4.81 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದ್ದು, 22431 ಮನೆಗಳ ಹಾನಿಯಾಗಿದೆ.
ಪ್ರಾಥಮಿಕ ಸಮೀಕ್ಷೆಯ ಪ್ರಕಾರ 10 ಸಾವಿರ ಕೋಟಿ ರೂಪಾಯಿ ಹಾನಿ ಅಂದಾಜಿಸಲಾಗಿದೆ. ಇಡೀ ರಾಜ್ಯದ ಪ್ರವಾಹ ಸ್ಥಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ.ವಿಜಯ್ ಭಾಸ್ಕರ್ ಅವರು, ಕೇಂದ್ರ ಗೃಹ ಮಂತ್ರಿ ಅಮಿತ್ ಶಾರಿಗೆ ವಿವರಿಸಿದರು.

19 ಎನ್.ಡಿ.ಆರ್.ಎಫ್. ತಂಡಗಳನ್ನು ನಿಯೋಜಿಸಲಾಗಿದ್ದು, ಕೊಡುಗು ಜಿಲ್ಲೆಯಲ್ಲಿ ಇನ್ನೂ ಎರಡು ಹೆಲಿಕಾಪ್ಟರ್ ಅಗತ್ಯವಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ಎರಡು ದಿನಗಳಲ್ಲೂ ಮಳೆಯ ಪ್ರಮಾಣ ಕಡಿಮೆಯಿದೆ. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ತಿಳಿಸಿದರು.

ಛಾಯಾ ಚಿತ್ರಗಳ ವೀಕ್ಷಣೆ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಗಿರುವ ಅನಾಹುತಗಳ ಛಾಯಾಚಿತ್ರ ಪ್ರದರ್ಶನವನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ವೀಕ್ಷಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಜಿಲ್ಲೆಯಲ್ಲಿ ಆಗಿರುವ ಹಾನಿಯ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ‌ ಸಂಸದೀಯ ವ್ಯವಹಾರಗಳ ಮಂತ್ರಿ ಪ್ರಹ್ಲಾದ ಜೋಶಿ, ಉಗಿಬಂಡಿ ಖಾತೆ ರಾಜ್ಯ ಮಂತ್ರಿ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ, ಶಾಸಕರಾದ ಉಮೇಶ ಕತ್ತಿ, ಅಭಯ ಪಾಟೀಲ, ಶಶಿಕಲಾ ಜೊಲ್ಲೆ, ದುರ್ಯೋಧನ ಐಹೊಳೆ, ಮಹಾದೇಪ್ಪ ಯಾದವಾಡ, ಉಪಸ್ಥಿತರಿದ್ದರು.