SHARE

ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವಿಸುವುದರಿಂದ ಕಾಲರಾ, ವಿಷಮಶೀತ ಜ್ವರ, ವಾಂತಿ ಭೇದಿ, ಆಮಶಂಕೆ, ಕಾಮಾಲೆ, ಇಲಿ ಜ್ವರ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗುವ ಸಂಭವವಿರುವ ಕಾರಣ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಕಾರಣ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ: 104ನ್ನು ಸಂಪರ್ಕಿಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಗಗಳು ಬರದಂತೆ ವಹಿಸಿಬೇಕಾದ ಕ್ರಮಗಳು: ನಾವು ಸೇವಿಸುವ ಆಹಾರ ಮತ್ತು ನೀರಿನ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಮಲಮೂತ್ರ ವಿಸರ್ಜನೆಗೆ ಶೌಚಾಲಯವನ್ನು ಉಪಯೋಗಿಸಬೇಕು, ಮಲಮೂತ್ರ ವಿಸರ್ಜನೆಯ ನಂತರ ಹಾಗೂ ಆಹಾರ ಸೇವಿಸುವ ಮೊದಲು ಕೈಕಾಲುಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು, ಕೈ ಬೆರಳುಗಳ ಉಗುರುಗಳು ಹೆಚ್ಚು ಬೆಳೆಯದಂತೆ ನೋಡಿಕೊಳ್ಳುವುದು, ಕುಡಿಯುವ ನೀರಿನ ಅಭಾವವಿದ್ದ ಪ್ರದೇಶಗಳಲ್ಲಿ ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನಾಗಲೀ ಅಥವಾ ಹ್ಯಾಲೋಜನ್ ಗುಳಿಗೆಗಳಿಂದ ಶುದ್ಧೀಕರಿಸಿದ ನೀರನ್ನೆ ಉಪಯೋಗಿಸಬೇಕು, ಕುಡಿಯುವ ನೀರಿನ ಸ್ಥಾವರಗಳ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಬೇಕು. ಅದರಂತೆ ಗ್ರಾಮದಲ್ಲಿ ಪರಿಸರ ನೈರ್ಮಲ್ಯಕ್ಕೆ ಮಹತ್ವ ಕೊಡಬೇಕು ನೊಣಗಳ ಹಾವಳಿಯನ್ನು ಹತೋಟಿಯಲ್ಲಿಡಬೇಕು, ತಾಜಾ ಹಾಗೂ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು, ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಬಿಸಿ ನೀರಿನಲ್ಲಿ ಅಥವಾ ಉಪ್ಪು ಮಿಶ್ರಿತ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಬೇಕು, ಭೇದಿ ನಿಯಂತ್ರಿಸಲು ತಪ್ಪದೇ ಓ.ಆರ್.ಎಸ್ ಬಳಸಬೇಕು, ಯಾವುದೇ ಸಾಂಕ್ರಾಮಿಕ ರೋಗ ಕಾಣಿಸಿದ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಯ ಸಲಹೆ ಪಡೆಯುವುದು ಮತ್ತು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವುದು.

ಈ ರೀತಿ ಮಾಡಬೇಡಿ: ಬಯಲಿನಲ್ಲಿ ನೀರಿನ ಸ್ಥಾವರಗಳ ಸುತ್ತಮುತ್ತ ದನಕರುಗಳ ಮೈ ತೊಳೆಯುವುದು ಹಾಗೂ ಬಟ್ಟೆ ಪಾತ್ರಗಳನ್ನು ತೊಳೆಯುವುದು, ಕುಡಿಯುವ ನೀರಿನಲ್ಲಿ ಕೈ ಅದ್ದುವುದು, ಬೀದಿ ಬದಿಯಲ್ಲಿ ತೆರೆದಿಟ್ಟ ಮತ್ತು ಕರಿದ ಆಹಾರ ಪದಾರ್ಥಗಳನ್ನು ಹಾಗೂ ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನುವುದು, ಮನೆ ವೈದ್ಯ ಮಾಡುವುದು, ಮೊದಲೇ ಸಿದ್ದಪಡಿಸಿದ ಆಹಾರವನ್ನು ಸೇವಿಸುವುದು, ಕೆರೆ, ನದಿ, ಹಳ್ಳ, ಹೊಂಡ, ಹೊಲಗದ್ದೆ ಮತ್ತು ಹರಿಯುವ ಕಾಲುವೆ ನೀರನ್ನು ಕುಡಿಯುವುದು, ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು.