SHARE

ಬೆಳಗಾವಿ: ಹಿರಿಯ ನ್ಯಾಯವಾದಿ ಒಬ್ಬರನ್ನು ಮೂರು ವ್ಯಕ್ತಿಗಳು ಅಟ್ಟಾಡಿಸಿ ಥಳಿಸಿದ ಘಟನೆ ಇಂದು ಮಹಾನಗರ ಪಾಲಿಕೆ ಎದುರು ನಡೆದಿದೆ. ತೆಂಗಿನಕೇರಿ ಗಲ್ಲಿಯ ಇನಾಮದಾರ ಕುಟುಂಬದ ಪರವಾಗಿ ವಕಾಲತು ವಹಿಸಿದ ಆರೋಪದಡಿ ರೊಚ್ಚಿಗೆದ್ದ ಮೂವರು ಆಂಜನೇಯ ನಗರದ ನಿವಾಸಿ ವಕೀಲ ಗಿರೀರಾಜ ನಿರಂಜನಗೌಡ ಪಾಟೀಲ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಮತ್ತೊಬ್ಬ ನ್ಯಾಯವಾದಿ ವಿಜಯ ದೇಸಾಯಿಗೂ ಥಳಿಸಲಾಗಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಲಭ್ಯವಾಗಿದೆ. ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಭೋವಿ ಗಲ್ಲಿಯ ಹನೀಪ್ ಹಂಚಿನಮನಿ ಹಾಗೂ ಜಿಯಾ ಹಂಚಿನಮನಿ ಎಂಬುವವರ ಮೇಲೆ ಐಪಿಸಿ 341, 323, 427, 504,506 ಅಡಿ ಪ್ರಕರಣ ದಾಖಲಿಸಿದ್ದಾರೆ. ಬೆಳಗಾವಿ ಬಾರ್ ಅಸೋಸಿಯೇಷನ್ ಇಂದು ಅಧ್ಯಕ್ಷ ಅನಿಲ ಜಿ. ಮುಳವಾಡಮಠ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ್ದು, ಮಂಗಳವಾರ ಕೋರ್ಟ್ ಕಲಾಪ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದೆ.