SHARE

ಬೆಳಗಾವಿ: ಹ್ಯೂಮನ್ ರೈಟ್ಸ್ ಸಂಘಟನೆ ಎಂದು ಹೇಳಿಕೊಂಡು ಹಲಗಾ ಗ್ರಾಮದ ಅಂಗನವಾಡಿ ತಪಾಸಣೆಗೆ ಇಳಿದು ₹2ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿರಾತಕರ ವಿರುದ್ಧ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಅಧಿಕಾರಿಗಳು ಎಂದು ಹೇಳಿಕೊಂಡು ಸೋಮವಾರ ಭಾರಿ ಪೋಷಾಕು ಧರಿಸಿ ಅಂಗನವಾಡಿ ಕೇಂದ್ರಕ್ಕೆ ತೆರಳಿದ ಐವರು ಕಿರಾತಕರು ಅಂಗನವಾಡಿ ಕೇಂದ್ರದಲಿ ದರ್ಪ ತೋರಿಸಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ತಮ್ಮನ್ನು ತಾವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಎಂದು ಹೇಳಿಕೊಂಡು ಸೂಟು- ಬೂಟು- ಕೋಟಿನಲ್ಲಿ ದರ್ಬಾರ್ ಮಾಡಲು ಹೋಗಿ ₹2ಲಕ್ಷ ಲಂಚ ಕೇಳಿದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿತರು: ನಗರದ ಶಹಾಪುರದ ವಿಶಾಲ ಶ್ರೀಕಾಂತ ದೇವಲತಕರ(೪೯), ಶಾಸ್ತ್ರೀನಗರದ ವಾಸು ತಮ್ಮಣ್ಣ ರೇವನಕರ(೩೨), ಶಾಸ್ತ್ರಿ ನಗರದ ಶಂಕರ ಗುಂಡು ಕಾಕತಿಕರ(೪೦), ಸದಾಶಿವನಗರದ ನಾಗಭುಷಣ ಪಾಂಡುರಂಗ ಅರಕಸಾಲಿ(೩೮), ಶಾಸ್ತ್ರೀನಗರದ ರಾಹುಲ ರಾಜು ದಿವಾಕರ(೧೯) ಎಂಬುವವರ ಮೇಲೆ ಸೆಕ್ಷೆನ್ 341,384, *420*, 504, 506, 511 ಐಪಿಸಿ ಅಡಿ ಪ್ರಕರಣ ದಾಖಲಿಸಿ ಹಿರೆಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬರುವವರ ಬಗ್ಗೆ ಜನತೆ ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.